Thursday, 12th December 2024

ಲಸಿಕೆ ದುಷ್ಪರಿಣಾಮಗಳಿಗೆ ಸರ್ಕಾರ ಹೊಣೆ ಆಗುವುದಿಲ್ಲ: ಕೇಂದ್ರ

ನವದೆಹಲಿ: ಕೊವಿಡ್​ 19 ಲಸಿಕೆಗಳಿಂದ ಆಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಅಫಿಡಿವಿಟ್​ ಸಲ್ಲಿಸಿದೆ.

ಸಾಂಕ್ರಾಮಿಕದ ವಿರುದ್ಧ ಭಾರತದಲ್ಲಿ ನಾಗರಿಕರಿಗೆ ಪ್ರಮುಖವಾಗಿ ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳನ್ನು ನೀಡಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ನೀಡುವ ಲಸಿಕೆಗಳು ಹೃದಯಾಘಾತ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇವು ದೇಹಕ್ಕೆ ಉಂಟು ಮಾಡಿದ ದುಷ್ಪರಿಣಾಮದಿಂದ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಕಳೆದ ವರ್ಷ ಇಬ್ಬರು ಯುವತಿಯರು ಕೊವಿಡ್​ 19 ಲಸಿಕೆ ತೆಗೆದುಕೊಂಡ ಕೆಲ ದಿನಗಳ ನಂತರ ಮೃತಪಟ್ಟಿದ್ದರು. ಆ ಇಬ್ಬರು ಯುವತಿಯರ ತಂದೆ-ತಾಯಿ (ಬೇರೆಬೇರೆ ಪ್ರಕರಣ ಇದು) ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ‘ಕೊವಿಡ್​ 19 ನಿಯಂತ್ರಣ ಲಸಿಕೆ ಬಳಿಕವೇ ಸಾವು ಸಂಭವಿಸಿದೆ. ಈ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು.

ಲಸಿಕೆ ತೆಗೆದುಕೊಂಡ ಬಳಿಕ ಅದರಿಂದ ದೇಹದ ಮೇಲೆ ಏನಾದರೂ ದುಷ್ಪರಿಣಾಮ ಆಗುತ್ತಿದ್ದರೆ, ಅದನ್ನು ಆದಷ್ಟು ಬೇಗ ಪತ್ತೆ ಮಾಡಲು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡುವ ಸಂಬಂಧ ಪ್ರೊಟೊಕಾಲ್​ ಸಿದ್ಧಪಡಿಸಲು ಪರಿಣತ ವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿ ರಚಿಸಬೇಕು. ಅಷ್ಟೇ ಅಲ್ಲ, ಸಾವಿಗೆ ಸರ್ಕಾರಗಳು ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದರು.

ಅರ್ಜಿಗಳ ವಿಚಾರಣೆ ಕೈಗತ್ತಿಕೊಂಡಿರುವ ಸುಪ್ರೀಂಕೋರ್ಟ್​, ಅಫಿಡವಿಟ್​ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪ್ರೀಂಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಿದೆ.

‘ಇದುವರೆಗೆ ಲಸಿಕೆಯಿಂದಾದ ದುಷ್ಪರಿಣಾಮದಿಂದ ಆದ ಮರಣ ಒಂದು ಮಾತ್ರ ಎಂದು ರಾಷ್ಟ್ರೀಯ ಎಇಎಫ್​ಐ ಸಮಿತಿ ತಿಳಿಸಿದೆ. ಯುವತಿಯರ ಸಾವಿನ ಬಗ್ಗೆ ನಮ್ಮ ಸಂತಾಪವಿದೆ. ಆದರೆ ಇದು ಲಸಿಕೆಯಿಂದ ಆಗಿದ್ದಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.