Friday, 20th September 2024

ಒಂದು ರಾಷ್ಟ್ರ, ಒಂದು ಚುನಾವಣೆ ದೇಶದ ಅವಶ್ಯಕತೆಯಾಗಿದೆ: ಪ್ರಧಾನಿ ಮೋದಿ

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಕೇವಲ ಚರ್ಚೆಗೆ ಸೀಮಿತವಾದ ವಿಷಯವಲ್ಲ, ಇದು ಭಾರತದ ಅವಶ್ಯಕತೆ ಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂವಿಧಾನ ದಿನದ ಸಂದರ್ಭದಲ್ಲಿ ಮಾತನಾಡಿ, ಲೋಕಸಭೆ, ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಿಗೆ ಏಕೆ ಮತ ದಾರರ ಪಟ್ಟಿಯನ್ನು ತರಬೇಕು ಎಂದು ಸಲಹೆ ನೀಡಿದರು.

ಪ್ರತಿ ಕೆಲವು ತಿಂಗಳಿಗೆ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಚುನಾವಣೆ ನಡೆಯುತ್ತಲೇ ಇರುತ್ತದೆ. ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಮಸ್ಯೆ ಬಗ್ಗೆ ಅಧ್ಯಯನ ನಡೆಯಬೇಕಿದೆ. ಇದಕ್ಕೆ ಅಧಿಕಾರಿಗಳು ಮಾರ್ಗದರ್ಶಕರಾಗಬಲ್ಲರು. ಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದನ್ನು ಸಂವಿಧಾನದಲ್ಲಿ ಅಳವಡಿಸಬೇಕಿದೆ ಎಂದರು.

ದೇಶದಲ್ಲಿ ನಡೆದ ಮೊದಲ ಮೂರು ಚುನಾವಣೆಗಳಲ್ಲಿ (1952, 57 ಮತ್ತು 62) ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆ ಗಳಿಗೆ ಏಕಕಾಲಕ್ಕೆ ಮತದಾನ ನಡೆದಿದ್ದವು. 1968 ಮತ್ತು 1969ರಲ್ಲಿ ಹಲವು ವಿಧಾನಸಭೆಗಳ ಅವಧಿಪೂರ್ವ ವಿಸರ್ಜನೆ ಹಾಗೂ 1970ರಲ್ಲಿ 4ನೇ ಲೋಕಸಭೆಯ ಅವಧಿಪೂರ್ವ ವಿಸರ್ಜನೆಯಿಂದಾಗಿ ಏಕಕಾಲದ ಚುನಾವಣೆ ಪ್ರಕ್ರಿಯೆಗೆ ತೆರೆ ಬಿದ್ದಿತ್ತು.

2014ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಈ ಪ್ರಸ್ತಾಪವನ್ನು ಮುಂದಿರಿಸಿ, ಚುನಾವಣಾ ಪ್ರಣಾಳಿಕೆಯಲ್ಲೂ ಉಲ್ಲೇಖ ಗೊಂಡಾಗ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿತ್ತು.

ಪ್ರಸ್ತುತ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿವರ್ಷವೂ ಒಂದಲ್ಲ ಒಂದು ರಾಜ್ಯಕ್ಕೆ ಚುನಾವಣೆ ಇದ್ದೇ ಇರುತ್ತದೆ. ಪದೇಪದೆ ಚುನಾವಣೆಗಳಿಂದ ಸರ್ಕಾರಗಳಿಂದ ಕೋಟ್ಯಂತರ ರೂ. ಖರ್ಚಾಗುತ್ತದೆ.