Friday, 20th September 2024

One Nation One Election: ʼಒಂದು ರಾಷ್ಟ್ರ ಒಂದು ಚುನಾವಣೆʼ ಪ್ರಸ್ತಾವನೆಯ ಮುಂದಿದೆ ಹಲವು ಸವಾಲು!

One Nation One Election

ಚುನಾವಣೆ (election) ಪ್ರಕ್ರಿಯೆಯಲ್ಲಿ ಸುಧಾರಣೆ ತರಲು ದೇಶಾದ್ಯಂತ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ನಿರ್ಣಯಿಸಿರುವ ಲೋಕಸಭೆ (loksabha), ರಾಜ್ಯ ವಿಧಾನಸಭೆ (vidhana sabha), ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು “ಒಂದು ರಾಷ್ಟ್ರ ಒಂದು ಚುನಾವಣೆ” (One Nation One Election) ಕುರಿತು ಉನ್ನತ ಮಟ್ಟದ ಸಮಿತಿಯು ನೀಡಿರುವ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ತಂಡವನ್ನು ರಚಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿವಿಧ ವಿಷಯಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

“ಒಂದು ರಾಷ್ಟ್ರ ಒಂದು ಚುನಾವಣೆ” ಪ್ರಕ್ರಿಯೆ ಅಡಿಯಲ್ಲಿ ಎರಡು ಹಂತಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲಾಗುವುದು. ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಮತ್ತು ಎರಡನೇ ಹಂತದಲ್ಲಿ ಮೊದಲ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

“ಒಂದು ರಾಷ್ಟ್ರ ಒಂದು ಚುನಾವಣೆ” ಬಗ್ಗೆ ಕಾನೂನು ಆಯೋಗವು ತನ್ನದೇ ಆದ ವರದಿಯನ್ನು ಶೀಘ್ರದಲ್ಲೇ ಮಂಡಿಸಲಿದೆ. 2029 ರಿಂದ ಲೋಕಸಭೆ, ರಾಜ್ಯ ವಿಧಾನಸಭೆ, ಪುರಸಭೆ ಮತ್ತು ಪಂಚಾಯತ್‌ಗಳಂತಹ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಕಾನೂನು ಆಯೋಗವು ಶಿಫಾರಸು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

One Nation One Election

18 ತಿದ್ದುಪಡಿಗೆ ಶಿಫಾರಸು

ರಾಮನಾಥ್ ಕೋವಿಂದ್ ಸಮಿತಿಯು 18 ಸಾಂವಿಧಾನಿಕ ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ. ಇವುಗಳಲ್ಲಿ ಹೆಚ್ಚಿನವುಗಳಿಗೆ ರಾಜ್ಯ ವಿಧಾನ ಸಭೆ, ವಿಧಾನ ಪರಿಷತ್ ಗಳ ಅನುಮೋದನೆ ಅಗತ್ಯವಿಲ್ಲ. ಆದರೆ ಇವುಗಳಿಗೆ ಕೆಲವು ಸಂವಿಧಾನ ತಿದ್ದುಪಡಿ ಮಸೂದೆಗಳು ಬೇಕಾಗುತ್ತವೆ. ಅದನ್ನು ಸಂಸತ್ತು ಅಂಗೀಕರಿಸಬೇಕಿದೆ. ಏಕ ಮತದಾರರ ಪಟ್ಟಿ ಮತ್ತು ಗುರುತು ಚೀಟಿಗೆ ಸಂಬಂಧಿಸಿ ಕೆಲವು ಪ್ರಸ್ತಾವಿತ ಬದಲಾವಣೆಗಳಿಗೆ ಕೆಲವು ರಾಜ್ಯಗಳ ಅನುಮೋದನೆಯ ಅಗತ್ಯವಿದೆ.

“ಒಂದು ರಾಷ್ಟ್ರ ಒಂದು ಚುನಾವಣೆ” ಬಗ್ಗೆ ಕಾನೂನು ಆಯೋಗವು ತನ್ನದೇ ಆದ ವರದಿಯನ್ನು ಶೀಘ್ರದಲ್ಲೇ ಮಂಡಿಸಲಿದೆ. 2029 ರಿಂದ ಲೋಕಸಭೆ, ರಾಜ್ಯ ವಿಧಾನಸಭೆ, ಪುರಸಭೆ ಮತ್ತು ಪಂಚಾಯತ್‌ಗಳಂತಹ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಕಾನೂನು ಆಯೋಗವು ಶಿಫಾರಸು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಏಕಕಾಲಕ್ಕೆ ಚುನಾವಣೆ ಹಿಂದೆ ನಡೆದಿತ್ತು

1951 ಮತ್ತು 1967ರ ನಡುವೆ ಭಾರತದಲ್ಲಿ ಏಕಕಾಲಕ್ಕೆ ಎಲ್ಲ ಚುನಾವಣೆಗಳನ್ನು ನಡೆಸಲಾಗಿತ್ತು. 1967ರಲ್ಲಿ ಸಂಸತ್ತಿನ ಕೆಳಮನೆಗೆ ನಡೆದ ರಾಷ್ಟ್ರೀಯ ಚುನಾವಣೆಗಳೊಂದಿಗೆ 20 ರಾಜ್ಯಗಳಲ್ಲಿ ಚುನಾವಣೆಗಳು ಏಕಕಾಲಕ್ಕೆ ನಡೆದಿದ್ದು ಕಾಕತಾಳೀಯವಾಗಿದೆ. 1977ರಲ್ಲಿ ಈ ಸಂಖ್ಯೆ 17 ಕುಸಿಯಿತು. 1980 ಮತ್ತು 1985ರಲ್ಲಿ ಕೇವಲ 14 ರಾಜ್ಯಗಳಲ್ಲಿ ಮಾತ್ರ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಿದವು. ಅನಂತರ ಮಧ್ಯಂತರ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ಮತದಾನ ಪ್ರಕ್ರಿಯೆಗಳು ಬೇರೆಬೇರೆ ಯಾಗಿ ನಡೆಯತೊಡಗಿತು.

ವಿವಿಧ ರಾಜ್ಯಗಳಲ್ಲಿ ಚುನಾವಣೆ ಅವಧಿ

ಎಲ್ಲಾ ರಾಜ್ಯಗಳಲ್ಲಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದು ಸುಲಭವಲ್ಲ. ಇದಕ್ಕಾಗಿ ಕೆಲವು ಕಡೆಗಳಲ್ಲಿ ಚುನಾವಣೆಯನ್ನು ಮೊದಲು, ಇನ್ನು ಕೆಲವು ಕಡೆಗಳಲ್ಲಿ ವಿಳಂಬವಾಗಿ ಮಾಡಬೇಕಿದೆ. ಈ ವರ್ಷ ಮೇ- ಜೂನ್‌ನಲ್ಲಿ ಲೋಕಸಭೆ ಚುನಾವಣೆ ನಡೆಯಿತು. ಇದರೊಂದಿಗೆ ಒಡಿಶಾ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಚುನಾವಣೆ ನಡೆಯಿತು.

ಪ್ರಸ್ತುತ ಜಮ್ಮು, ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ವರ್ಷದ ಕೊನೆಯಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ನಲ್ಲೂ ಚುನಾವಣೆ ನಡೆಯಲಿದೆ. 2025ರಲ್ಲಿ ದೆಹಲಿ ಮತ್ತು ಬಿಹಾರ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಅಲ್ಲದೇ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭೆಗಳ ಅವಧಿ 2026ರಲ್ಲಿ ಹಾಗೂ ಗೋವಾ, ಗುಜರಾತ್, ಮಣಿಪುರ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆಗಳ ಅವಧಿ 2027ರಲ್ಲಿ ಕೊನೆಗೊಳ್ಳಲಿದೆ.

ಹಿಮಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆಗಳ ಅವಧಿ 2028ರಲ್ಲಿ ಕೊನೆಗೊಳ್ಳಲಿದೆ. ಈ ವರ್ಷ ಅಧಿಕಾರಕ್ಕೆ ಬಂದಿರುವ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಅಧಿಕಾರ ಅವಧಿ 2029ರಲ್ಲಿ ಕೊನೆಗೊಳ್ಳಲಿದೆ.

One Nation One Election

ಮುಂದಿನ ನಡೆ ಏನು?

“ಒಂದು ರಾಷ್ಟ್ರ ಒಂದು ಚುನಾವಣೆ” ಪ್ರಸ್ತಾವನೆಯನ್ನು ಜಾರಿಗೊಳಿಸಲು ಸಂಸತ್ತು ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಬೇಕಿದೆ. ಇದಕ್ಕೆ ವಿವಿಧ ರಾಜಕೀಯ ಪಕ್ಷಗಳ ವ್ಯಾಪಕ ಬೆಂಬಲ ಬೇಕಾಗುತ್ತದೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲದ ಕಾರಣ ಅದು ತನ್ನ ಎನ್‌ಡಿಎ ಮಿತ್ರಪಕ್ಷಗಳನ್ನು ಮಾತ್ರವಲ್ಲ ವಿರೋಧ ಪಕ್ಷಗಳ ಬೆಂಬಲವನ್ನೂ ಗಳಿಸಬೇಕಿದೆ.

ಈಗಾಗಲೇ ಎನ್‌ಡಿಎ ಘಟಕ ಜನತಾ ದಳ (ಯುನೈಟೆಡ್) ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಸ್ವಾಗತಿಸಿದೆ. ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್ ಅವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ ದೀರ್ಘಾವಧಿಯ ಪರಿಣಾಮಗಳನ್ನು ಉಂಟು ಮಾಡುತ್ತದೆ ಮತ್ತು ದೇಶಕ್ಕೆ ಹೆಚ್ಚು ಪ್ರಯೋಜನ ತರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಕಕಾಲದ ಚುನಾವಣೆ ಪ್ರಾಯೋಗಿಕವಲ್ಲ. ಚುನಾವಣೆ ಸಮೀಪಿಸುತ್ತಿರುವಾಗ ನೈಜ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಇಂತಹ ವಿಷಯಗಳನ್ನು ಮುಂದಿಡುತ್ತಿದೆ ಎಂದು ಆರೋಪಿಸಿದ್ದಾರೆ.

ಎಲ್ಲರ ನಡುವೆ ಒಮ್ಮತವನ್ನು ಮೂಡಿಸಲು ವಿರೋಧ ಪಕ್ಷದ ಸದಸ್ಯರನ್ನು ಒಳಗೊಂದು ಸ್ಥಾಯಿ ಸಮಿತಿ ಅಥವಾ ಜಂಟಿ ಸಂಸದೀಯ ಸಮಿತಿಯನ್ನು ರಚಿಸುವ ಸಾಧ್ಯತೆ ಇದೆ. “ಒಂದು ರಾಷ್ಟ್ರ ಒಂದು ಚುನಾವಣೆ” ಗೆ ಕೇಂದ್ರದೊಂದಿಗೆ ರಾಜ್ಯಗಳು ಒಳಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಏಕಕಾಲಿಕ ಚುನಾವಣಾ ಯೋಜನೆಯ ಭಾಗವಾಗಬೇಕಾದರೆ ಕನಿಷ್ಠ ಅರ್ಧದಷ್ಟು ರಾಜ್ಯಗಳು ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿಯನ್ನು ಅನುಮೋದಿಸಬೇಕಿದೆ. ಬಿಜೆಪಿಯು ಪ್ರಸ್ತುತ ಹನ್ನೆರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆಯಾದರೂ ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳು ಈ ಸಂಖ್ಯೆಯನ್ನು ಬದಲಾಯಿಸಬಹುದು.

83 ಮತ್ತು 172ನೇ ವಿಧಿಯಲ್ಲಿ ತಿದ್ದುಪಡಿಗೆ ಶಿಫಾರಸು

ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸಲು ಕೋವಿಂದ್ ಸಮಿತಿಯು ಲೋಕಸಭೆಯ ಅಧಿಕಾರವಧಿಯನ್ನು ಒಳಗೊಂಡಿರುವ ಸಂವಿಧಾನದ 83 ಮತ್ತು ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯನ್ನು ಒಳಗೊಂಡಿರುವ 172 ನೇ ವಿಧಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಎಲ್ಲ ಚುನಾವಣೆಗಳನ್ನು ಒಟ್ಟಿಗೆ ಮಾಡಲು ಸೂಚಿಸಿರುವ ಕೋವಿಂದ್ ಸಮಿತಿಯು ಇದಕ್ಕಾಗಿ ಸಾರ್ವತ್ರಿಕ ಚುನಾವಣೆಯ ಅನಂತರ ಲೋಕಸಭೆಯು ರಚನೆಯಾದಾಗ ಅಧ್ಯಕ್ಷರು ಮೊದಲ ಸಭೆಯ ದಿನಾಂಕದಂದು ಅಧಿಸೂಚನೆಯ ಮೂಲಕ ಪರಿವರ್ತನೆಯ ನಿಬಂಧನೆಗಳನ್ನು ಜಾರಿಗೆ ತರಬೇಕು. ಈ ದಿನವನ್ನೇ ನೇಮಕ ದಿನ ಎಂದು ಕರೆಯಲಾಗುತ್ತದೆ.

ರಾಜ್ಯ ಅಸೆಂಬ್ಲಿಯು ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಪ್ರಸ್ತಾವಿತ ವಿಧಿ 82ಎ ಅಡಿಯಲ್ಲಿ ನೇಮಕ ದಿನಾಂಕದ ಅನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಚಿತವಾದ ಎಲ್ಲಾ ರಾಜ್ಯ ಅಸೆಂಬ್ಲಿಗಳ ಅಧಿಕ ಅವಧಿಯು ಲೋಕಸಭೆಯ ಪೂರ್ಣ ಅವಧಿ ಮುಕ್ತಾಯದ ಬಳಿಕ ಕೊನೆಯಾಗುತ್ತದೆ.

Atishi Marlena: ಸೆ.21ರಂದು ಆತಿಶಿ ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

One Nation One Election

ಏನು ಪರಿಣಾಮ?

ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ಮತ್ತು ಕರ್ನಾಟಕದಲ್ಲಿ 2028ರಲ್ಲಿ ಮುಂದಿನ ವಿಧಾನಸಭಾ ಚುನಾವಣೆಗಳು ನಿಗದಿಯಾಗಿದೆ. ಈ ಅಸೆಂಬ್ಲಿಗಳ ಅವಧಿಯನ್ನು ಮೇ ಅಥವಾ ಜೂನ್ 2029ರಲ್ಲಿ ಮುಕ್ತಾಯಗೊಳಿಸುತ್ತವೆ. ಇದು ಮುಂದಿನ ಲೋಕಸಭೆಯ ಅವಧಿಗೆ ಹೊಂದಿಕೆಯಾಗುತ್ತದೆ. 2029ರ ವೇಳೆಗೆ ಒಂದು ರಾಷ್ಟ್ರ, ಒಂದು ಚುನಾವಣಾ ನೀತಿಯು ಜಾರಿಯಾದ ಬಳಿಕ ಬಹುಮತದ ನಷ್ಟದಿಂದಾಗಿ ಲೋಕಸಭೆ ಅಥವಾ ರಾಜ್ಯ ವಿಧಾನಸಭೆಯು ಐದು ವರ್ಷಗಳ ಅವಧಿಗೆ ಮುಂಚಿತವಾಗಿ ವಿಸರ್ಜಿಸಿದರೆ ಹೊಸ ಚುನಾವಣೆಗಳನ್ನು ನಡೆಸಲು ಸಮಿತಿ ಶಿಫಾರಸ್ಸು ಮಾಡಿದೆ. ಇವುಗಳನ್ನು ಮಧ್ಯಂತರ ಚುನಾವಣೆ ಎಂದು ಪರಿಗಣಿಸಲಾಗುತ್ತದೆ. ಹೊಸ ಸರ್ಕಾರವು ಅವಧಿಯ ಉಳಿದ ಭಾಗವನ್ನು ಮಾತ್ರ ಪೂರೈಸುತ್ತದೆ ಎಂದು ಸಮಿತಿ ತಿಳಿಸಿದೆ.