Wednesday, 8th January 2025

Online Fraud: ಇದು ಗಾಳಕ್ಕೆ ಹುಳ ಸಿಕ್ಕಿಸಿ ಮೀನು ಹಿಡಿಯುವ ಟೆಕ್ನಿಕ್..! ಆನ್ ಲೈನ್ ವಂಚಕರ ಈ ಹೊಸ ಫ್ರಾಡ್ ಬಗ್ಗೆ ನಿಮಗೆಷ್ಟು ಗೊತ್ತು..?

ಸೈಬರ್ ಕ್ರಿಮಿನಲ್ ಗಳು (Cyber criminals) ಮೋಸದ ಮೂಲಕ ಹಣ ಲಪಟಾಯಿಸಲು ದಿನಕ್ಕೊಂದು ಹೊಸ ವಿಧಾನವನ್ನು ಆವಿಷ್ಕರಿಸುತ್ತಿದ್ದಾರೆ. ಅವರ ಈ ಹೊಸ ಹೊಸ ವಂಚನಾ ವಿಧಾನಗಳು (Online Fraud) ಡಿಜಿಟಲ್ ಗ್ರಾಹಕರಿಗೆ (Digital User) ಮಾತ್ರವಲ್ಲದೇ, ಸೈಬರ್ ಕ್ರೈಂ (Cyber Crime) ಅಧಿಕಾರಿಗಳೂ ಸಹ ತಲೆನೋವಿನ ವಿಚಾರವಾಗಿದೆ. ಇದೀಗ ಯುಪಿಐ ಬಳಕೆದಾರರನ್ನು (UPI Users) ಗುರಿಯಾಗಿಸಿಕೊಂಡು ‘ಜಂಪ್ಡ್ ಡಿಪಾಸಿಟ್ ಸ್ಕ್ಯಾಮ್’ (Jumped Deposit Scam) ಎಂಬ ಹೊಸ ಫ್ರಾಡ್ ಒಂದು ಬೆಳಕಿಗೆ ಬಂದಿದೆ.

ಈ ಸ್ಕ್ಯಾಮ್ ನಲ್ಲಿ ಸೈಬರ್ ಕ್ರಿಮಿನಲ್ ಗಳು ನಿಮ್ಮ ಬ್ಯಾಂಕ್ ಅಕೌಂಟಿಗೆ ಯುಪಿಐ ಮೂಲಕ ಒಂದಷ್ಟು ಹಣವನ್ನು ಕಳಿಸುತ್ತಾರೆ. ನಿಮ್ಮ ಮೊಬೈಲಿನಲ್ಲಿ ಕ್ರೆಡಿಟ್ ನೋಟಿಫಿಕೇಶನ್ ಬಂದ ಕಾರಣ ನೀವು ಸಹಜವಾಗಿಯೇ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡುತ್ತೀರಿ, ಇದನ್ನೇ ದುರುಪಯೋಗಪಡಿಸಿಕೊಳ್ಳುವ ಸ್ಕ್ಯಾಮರ್ ಗಳು ನಿಮ್ಮ ಖಾತೆಯಲ್ಲಿರುವ ಹಣವನ್ನು ಲಪಟಾಯಿಸಲು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನೀವು ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಲು ಪಿನ್ ಹಾಕಿದ ತಕ್ಷಣವೇ ನಿಮ್ಮ ಅಕೌಂಟ್ ನಲ್ಲಿದ್ದ ಹಣವೆಲ್ಲಾ ‘ಗಾಯಬ್’ ಆಗುತ್ತದೆ! ಇದು ಒಂಥರಾ ಗಾಳಕ್ಕೆ ಹುಳ ಸಿಕ್ಕಿಸಿ ಮೀನು ಹಿಡಿಯುವ ಸ್ಟೈಲಿನ ಹೊಸ ಫ್ರಾಡ್!

ಅಪರಿಚಿತ ವ್ಯಕ್ತಿಗಳಿಂದ ನಿಮಗೆ ಯುಪಿಐ ಪೇಮೆಂಟ್ ಆದ ಪಕ್ಷದಲ್ಲಿ ಈ ಬಗ್ಗೆ ಎಚ್ಚರಿಕೆಯಿಂದಿರುವಂತೆ ಇತ್ತೀಚೆಗೆ ತಮಿಳುನಾಡು ಪೊಲೀಸರು ಸಾರ್ವಜನಿಕ ಪ್ರಕಟನೆ ಹೊರಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈಗಾಗಲೇ ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ನಲ್ಲಿ ಹಲವಾರು ದೂರುಗಳು ದಾಖಲಾಗಿವೆ. ಇಂತಹ ಅಪರಿಚಿತ ಪೇಮೆಂಟ್ ಗಳು ನಿಮ್ಮ ಅಕೌಂಟ್ ಗೆ ಆದಲ್ಲಿ ಆ ಬಗ್ಗೆ ಜಾಗರೂಕರಾಗಿರುವಂತೆ ಈಗಾಗಲೇ ಸೂಚನೆಯನ್ನೂ ಸಹ ನೀಡಲಾಗಿದೆ.

ಹಾಗಾದ್ರೆ ಈ ಸ್ಕ್ಯಾಮ್ ಹೇಗೆ ನಡೆಯುತ್ತೆ..?

ಸ್ಕ್ಯಾಮರ್ ಗಳು ಒಂದು ಸಣ್ಣ ಮೊತ್ತದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಯುಪಿಐ ಮೂಲಕ ಕ್ರೆಡಿಟ್ ಮಾಡುತ್ತಾರೆ. ಬಳಿಕ ಅವರು ಅಕೌಂಟ್ ದಾರರಿಗೆ ತಾವು ಕಳಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಹಿಂಪಾತಿಸುವಂತೆ ನಯವಾಗಿ ಮನವಿ ಮಾಡಿಕೊಳ್ಳುತ್ತಾರೆ. ನಿಮ್ಮ ಅಕೌಂಟಿಗೆ ದುಡ್ಡು ಬಂದಿದೆ ಎಂದು ನಿಮಗೆ ನೋಟಿಫಿಕೇಶನ್ ಬಂದ ಕೂಡಲೇ ನೀವು ಬ್ಯಾಲೆನ್ಸ್ ಚೆಕ್ ಮಾಡಲು ಹೋಗುತ್ತೀರಿ. ಇದೀಗ ನಿಮ್ಮ ಯುಪಿಐ ಆಪ್ ಮೂಲಕ ನೀವು ನಿಮ್ಮ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡುತ್ತಿದ್ದಂತೆ, ನೀವಲ್ಲಿ ನಿಮ್ಮ ಪಿನ್ ಹಾಕುತ್ತಿದ್ದಂತೆ ನಿಮ್ಮ ಅಷ್ಟೂ ಹಣಕ್ಕೆ ಸಂಚಕಾರ ಬಂದಂತೆಯೇ ಸರಿ!

ಇಲ್ಲಿ ಫ್ರಾಡರ್ ಗಳು ಮೊದಲೇ ವಿದ್ರಾವಲ್ ರಿಕ್ವೆಸ್ಟನ್ನು ಚಾಲನೆ ಮಾಡಿರುತ್ತಾರೆ, ಮತ್ತು ನೀವು ನಿಮ್ಮ ಯುಪಿಐ ಪಿನ್ ಹಾಕಿದ ತಕ್ಷಣವೇ ಪೆಂಡಿಂಗ್ ರಿಕ್ವೆಸ್ಟ್ ಸ್ವೀಕೃತಗೊಂಡು, ನಿಮ್ಮ ಅಕೌಂಟಿನಿಂದ ಹಣ ವಂಚಕರ ಖಾತೆಗೆ ವರ್ಗಾವಣೆಗೊಳ್ಳುತ್ತದೆ.

ಹಾಗಾದ್ರೆ ನಿಮ್ಮ ಹಣವನ್ನು ಹೇಗೆ ರಕ್ಷಿಸಿಕೊಳ್ಳಬಹುದು..?

ಯುಪಿಐ ಬಳಕೆದಾರರು ಈ ಸ್ಕ್ಯಾಮ್ ನಿಂದ ತಮ್ಮನ್ನು ತಾವು ಎರಡು ರೀತಿಯಲ್ಲಿ ರಕ್ಷಿಸಿಕೊಳ್ಳಬಹುದಾಗಿರುತ್ತದೆ. ಮೊದಲನೆಯದಾಗಿ, ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಅಕೌಂಟಿಗೆ ಹಣ ಕ್ರೆಡಿಟ್ ಆಗಿದೆ ಎಂಬ ಸಂದೇಶ ಬಂದ ಕೂಡಲೇ, ತಕ್ಷಣ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಲು ಹೋಗಬೇಡಿ.. ಬದಲಿಗೆ 15-30 ನಿಮಿಷ ಕಾಯಿರಿ. ಹೀಗೆ ಮಾಡಿದಾಗ ವಂಚಕರು ಕಳುಹಿಸಿದ್ದ ವಿಡ್ರಾವಲ್‌ ರಿಕ್ವೆಸ್ಟ್ ಎಕ್ಸ್ ಪೈರ್ ಆಗುತ್ತದೆ ಮತ್ತು ಪಿನ್ ಎಂಟ್ರಿ ವಂಚಕರಿಗೆ ಉಪಯೋಗವಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: Viral News: ಕೇವಲ ನಾಲ್ಕು ತಿಂಗಳಲ್ಲಿ 27 ಕೆ.ಜಿ. ದೇಹ ತೂಕ ಇಳಿಕೆ – ಏನು ಮಾಡಿದ ಈ ಒಮರ್..!?

ಎರಡನೆಯದಾಗಿ, ಹಣ ಕ್ರೆಡಿಟ್ ಆದ ಸಂದೇಶ ಬಂದ ಕೂಡಲೇ ನಿಮಗೆ ಕಾಯಲು ಸಾಧ್ಯವಿಲ್ಲ ಎಂದಾದರೆ, ನೀವು ತಪ್ಪು ಪಿನ್ ಸಂಖ್ಯೆಯನ್ನು ನಮೂದಿಸಿ. ಇದರಿಂದಾಗಿ ಯಾವುದೇ ಪೆಂಡಿಂಗ್ ಟ್ರಾನ್ಸಾಕ್ಷನ್ ಗಳು ತಿರಸ್ಕೃತಗೊಳ್ಳುತ್ತವೆ. ಒಟ್ಟಿನಲ್ಲಿ ಆನ್ ಲೈನ್ ವಂಚಕರ ಹೊಸ ಹೊಸ ಟೆಕ್ನಿಕ್ ಗಳಿಗೆ ಜನರು ಸಹ ಎಚ್ಚರಿಕೆ ವಹಿಸಿದಲ್ಲಿ ಸಂಭಾವ್ಯ ಆನ್ ಲೈನ್ ವಂಚನಾ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ.

Leave a Reply

Your email address will not be published. Required fields are marked *