ಟೊಕಿಯೊ: ಮಾರುತಿ–ಸುಜುಕಿ(Maruti Suzuki) ಮೂಲಕ ಭಾರತದ ವಾಹನ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ ಜಪಾನ್‌ನ ಒಸಾಮು ಸುಜುಕಿ ಅವರು ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು (Osamu Suzuki)
ಒಸಾಮು ಅವರು ಸುಜುಕಿ ಮೋಟಾರು ಕಂಪನಿಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ನಾಲ್ಕು ದಶಕಗಳ ಕಾಲ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದರ ಜತೆಗೆ, ಭಾರತದಲ್ಲೂ ಸುಜುಕಿ ಕಂಪನಿಯ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದವರು. 660 ಸಿಸಿ ಸಾಮರ್ಥ್ಯದ ಅಗ್ಗದ ಹಾಗೂ ಪುಟ್ಟ ಕಾರುಗಳನ್ನು ಉತ್ಪಾದಿಸುವ ಮೂಲಕ ಗ್ರಾಹಕರಿಗೆ ತೆರಿಗೆ ಹೊರೆಯನ್ನೂ ಒಸಾಮು ಕಡಿಮೆ ಮಾಡಿದ್ದರು.
Deeply saddened by the passing of Mr. Osamu Suzuki, a legendary figure in the global automotive industry. His visionary work reshaped global perceptions of mobility. Under his leadership, Suzuki Motor Corporation became a global powerhouse, successfully navigating challenges,… pic.twitter.com/MjXmYaEOYA
— Narendra Modi (@narendramodi) December 27, 2024
ಒಸಾಮು ಅವರು ಮತ್ಸುಡಾ ಕುಟುಂಬಕ್ಕೆ ಸೇರಿದವರಾಗಿದ್ದರು. ಆದರೆ ಪತ್ನಿಯ ಕುಟುಂಬದ ಉಪನಾಮ ಸುಜುಕಿಯನ್ನು ಇಟ್ಟುಕೊಂಡಿದ್ದರು. ಗಂಡು ಸಂತಾನವಿಲ್ಲದ ಕುಟುಂಬದ ಹೆಣ್ಣುಮಗಳನ್ನು ವರಿಸಿದ್ದರಿಂದ ಜಪಾನ್‌ನ ಸಂಪ್ರದಾಯದಂತೆ ಅಲ್ಲಿಯ ಉಪನಾಮವನ್ನೇ ಒಸಾಮು ಇಟ್ಟುಕೊಂಡಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಒಸಾಮು, ನಂತರ ಪತ್ನಿಯ ಅಜ್ಜ ಸ್ಥಾಪಿಸಿದ್ದ ಕಂಪನಿಯಲ್ಲಿ ಕೆಲಸ ಆರಂಭಿಸಿದರು. 1958ರಲ್ಲಿ ಕಂಪನಿ ಸೇರಿದರೂ, ಕೇವಲ ಎರಡೇ ದಶಕದಲ್ಲಿ ಉನ್ನತ ಹುದ್ದೆಗೇರಿದರು. ಹೊಸ ಪರಿಸರ ನೀತಿಗೆ ಪೂರಕವಾಗಿ ಎಂಜಿನ್ ಅನ್ನು ಟೊಯೊಟಾದಿಂದ ಪಡೆಯುವ ಮೂಲಕ 1970ರಲ್ಲಿ ಸುಜುಕಿ ಕಂಪನಿಯನ್ನು ಅವಿರತವಾಗಿ ಶ್ರಮಿಸಿ ಒಸಾಮು ಉಳಿಸಿದರು. ಅಲ್ಲಿಂದ ಆಲ್ಟೊ ಮಿನಿ ವಾಹನವು ಭಾರೀ ಬೇಡಿಕೆ ಪಡೆಯಿತು. 1981ರಲ್ಲಿ ಜನರಲ್ ಮೋಟಾರ್ಸ್ ಜತೆ ಸುಜುಕಿ ಕೈಜೋಡಿಸಿತು.
ಭಾರತಕ್ಕೆ ಲಗ್ಗೆಯಿಟ್ಟ ಸುಜುಕಿ!
ಸುಜುಕಿ ಕಂಪನಿಯು ತನ್ನ ಒಂದು ವರ್ಷದ ಆದಾಯವನ್ನು ಭಾರತದಲ್ಲಿ ಕಂಪನಿ ಸ್ಥಾಪಿಸಲು ಖರ್ಚು ಮಾಡುವ ಮೂಲಕ ದೊಡ್ಡ ಸವಾಲನ್ನು ಎದುರಿಸಿತು. ಒಸಾಮು ಅವರು ಅತೀವ ಆಸಕ್ತಿಯಿಂದ ಹಾಗೂ ಜಗತ್ತಿನ ಯಾವುದಾದರೂ ರಾಷ್ಟ್ರದಲ್ಲಿ ತಮ್ಮ ಕನಸಿನ ಕೂಸಾದ ಸುಜುಕಿ ನಂ.1 ಆಗಲೇಬೇಕು ಎಂಬ ಉತ್ಸಾಹ ಮತ್ತು ಛಲದಿಂದ ತಮ್ಮ ಆಸೆ, ಕನಸಿಗಳಿಗೆ ರೆಕ್ಕೆ ಕಟ್ಟಿ ಹಾರಲು ಬಿಟ್ಟರು. ಆ ಸಂದರ್ಭದಲ್ಲಿ ಭಾರತದಲ್ಲಿ ವಾರ್ಷಿಕ 40 ಸಾವಿರಕ್ಕಿಂತಲೂ ಕಡಿಮೆ ಕಾರುಗಳು ಮಾರಾಟವಾಗುತ್ತಿದ್ದವು. ಅದರಲ್ಲೂ ಬ್ರಿಟಿಷ್ ಕಂಪನಿಗಳ ಪಾರುಪತ್ಯವೇ ನಡೆದಿತ್ತು.
1971ರಲ್ಲಿ ಸಂಜಯ್ ಗಾಂಧಿ ಅವರ ಕನಸಿನ ಯೋಜನೆಯಾಗಿ ಮಾರುತಿ ಕಂಪನಿಯನ್ನು ಇಂದಿರಾಗಾಂಧಿ ಸರ್ಕಾರ ಪ್ರಾರಂಭಿಸಿತ್ತು. ಆ ಮೂಲಕ ಭಾರತದ ಜನರಿಗೆ ಸ್ವದೇಶಿ ನಿರ್ಮಿತ, ಅಗ್ಗದ ಕಾರು ತಯಾರಿಸಿ ನೀಡುವ ಯೋಜನೆಯನ್ನು ಅವರು ಹೊಂದಿದ್ದರು. ಇದನ್ನು ಸಾಕಾರಗೊಳಿಸಲು ಒಂದು ವಿದೇಶಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದರು. ಹೀಗಾಗಿ ಆರಂಭದಲ್ಲಿ ರಿನೋದೊಂದಿಗೆ ಪಾಲುದಾರಿಕೆಗೆ ಸಿದ್ಧವಾಗುವ ಮೂಲಕ ಸೆಡಾನ್ ಮಾದರಿಯ ಕಾರನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಲಾಗಿತ್ತು. ಆದರೆ ಅದು ತೀರಾ ದುಬಾರಿ ಮತ್ತು ಇಂಧನ ಕ್ಷಮತೆ ಅಷ್ಟಾಗಿ ಇರದ ಕಾರಣ ಆ ಯೋಜನೆಯನ್ನು ಕೈಬಿಡಬೇಕಾಯಿತು.
ಆ ಸಂದರ್ಭದಲ್ಲಿ ಮಾರುತಿಯು ವಿವಿಧ ಕಂಪನಿಗಳ ಬಾಗಿಲು ಬಡಿಯಿತು. ಇದರಲ್ಲಿ ಫಿಯಟ್ ಹಾಗೂ ಸುಬರು ಕೂಡಾ ಸೇರಿತ್ತು. ಈ ನಡುವೆ ಮಾರುತಿಯು ಜಪಾನ್‌ನ ಡೈಹಾಟ್ಸು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಅದು ಮುರಿದುಬಿದ್ದ ಮಾಹಿತಿ ಪಡೆದ ಸುಜುಕಿ, ತಮಗೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಹೀಗೆ ಸುಜುಕಿ ಜತೆಗೂಡಿದ ಮಾರುತಿ, ಮತ್ತೆಂದೂ ಹಿಂದೆ ತಿರುಗಿ ನೋಡಲಿಲ್ಲ. ಮಾರುತಿ ಹಾಗೂ ಸುಜುಕಿ ಜತೆಗೂಡಿ ಮೊದಲು ಹೊರತಂದಿದ್ದೇ ‘ಮಾರುತಿ 800’ ಕಾರನ್ನು. ಆಲ್ಟೊ ಕಾರಿನ ಪ್ಲಾಟ್‌ಫಾರ್ಮ್‌ನಡಿ ಸಿದ್ಧಗೊಂಡ ಈ ಕಾರು 1983ರಲ್ಲಿ ಬಿಡುಗಡೆಗೊಂಡಿತು. ಜತೆಗೆ ಭಾರೀ ಜನಪ್ರಿಯತೆಯನ್ನೂ ಪಡೆಯಿತು. ಸದ್ಯ ಮಾರುತಿ ಸುಜುಕಿ ಕಂಪನಿಯು ದೇಶದ ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ಶೇ. 40ರಷ್ಟು ಪಾಲನ್ನು ಹೊಂದಿದೆ.
ಈ ಸುದ್ದಿಯನ್ನೂ ಓದಿ:Manmohan Singh: ಮನಮೋಹನ್ ಸಿಂಗ್ ನನಗೆ ಹಿರಿಯಣ್ಣನಂತಿದ್ದರು; ದಲೈಲಾಮಾ ಭಾವುಕ ಪತ್ರ