ಜೌನ್‌ಪುರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಚಿಂಗ್ ಸೆಂಟರ್ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಅಜಯ್ ಕುಶ್ವಾಹ್ ಕೊಲೆಯಾದವರು. ಭಾನುವಾರ ಕೋಚಿಂಗ್ ಸೆಂಟರ್ನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಅಜಯ್ ಅವರ ಎದೆಗೆ ಗುಂಡಿಕ್ಕಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದು ಅವರು ಸಾವಿಗೀಡಾಗಿದ್ದಾರೆ.
ಅಜಯ್ ಕುಶ್ವಾಹ್ ಅವರು ಪ್ರತಿದಿನ ತಮ್ಮ ಕೋಚಿಂಗ್ ಸೆಂಟರ್ನಲ್ಲೇ ಮಲಗುತ್ತಿದ್ದರು. ಸೆಂಟರ್ನ ಕಾರ್ಯಚಟುವಟಿಕೆಗಳು ಬೆಳಗ್ಗೆ 4 ಗಂಟೆ ಯಿಂದಲೇ ಆರಂಭವಾಗುತ್ತಿದ್ದವು. ಶನಿವಾರ ಮಲಗಿದ್ದಾಗ ರಾತ್ರಿ 2 ರಿಂದ 3 ಗಂಟೆಯ ಸುಮಾರಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್ಪಿ ಡಾ. ಅಜಯ್ ಪಾಲ್ ಶರ್ಮಾ, ಜಾಫ್ರಾಬಾದ್ ನಗರಸಭೆ ಅಧ್ಯಕ್ಷ ಕಿಶೋರ್ ಚೌಬೆ ಮತ್ತು ಎಸ್‌ಒಜಿ ತಂಡ ಸ್ಥಳಕ್ಕೆ ತಲುಪಿತ್ತು. ಘಟನೆಯ ಕುರಿತು ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು 4 ತಂಡಗಳನ್ನು ರಚಿಸಲಾಗಿದೆ.
ಅಜಯ್ ಅವರ ಕುಟುಂಬಕ್ಕೆ ಯಾರೊಂದಿಗೂ ದ್ವೇಷವಿಲ್ಲ. ಅಜಯ್ ಕೂಡ ಯಾರೊಂದಿಗೂ ವೈಮನಸ್ಸು ಹೊಂದಿರಲಿಲ್ಲ. ಸೆಂಟರ್ನಲ್ಲಿ ಅಜಯ್ ಮತ್ತು ಆತನ ಮೂವರು ಸ್ನೇಹಿತರು ಮಲಗುತ್ತಿದ್ದರು. ಆದರೆ, ಶನಿವಾರ ರಾತ್ರಿ ಒಬ್ಬರೇ ಮಲಗಿದ್ದರು. ಈ ವೇಳೆ ದಾಳಿ ನಡೆಸಲಾಗಿದೆ.
ನಗರಸಭೆ ಅಧ್ಯಕ್ಷ ರಾಮಸುರತ್ ಮೌರ್ಯ, ಅಜಯ್ ಸಜ್ಜನ ವ್ಯಕ್ತಿಯಾಗಿದ್ದು, ಯಾರೋ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ. ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿಧಿವಿಜ್ಞಾನ ತಂಡವೂ ಸಾಕ್ಷ್ಯ ಸಂಗ್ರಹಿಸಿದೆ ತಿಳಿಸಿದ್ದಾರೆ.