Tuesday, 26th November 2024

PAN 2.0: ದೇಶದಲ್ಲಿ ಪ್ಯಾನ್‌ 2.0 ಜಾರಿಗೆ ಕೇಂದ್ರದ ಸಿದ್ಧತೆ; ಏನಿದು ಯೋಜನೆ? ಹಳೆಯ ಪ್ಯಾನ್ ಕಾರ್ಡ್ ಏನಾಗುತ್ತೆ?

PAN 2.0

ಹೊಸದಿಲ್ಲಿ: ದೇಶದಲ್ಲಿ ಆಧಾರ್‌ (Aadhar Card)ನಷ್ಟೇ ಇನ್ನೊಂದು ಪ್ರಮುಖ ಗುರುತಿನ ಚೀಟಿ ಎಂದರೆ ಅದು ಪ್ಯಾನ್‌ (PAN) ಕಾರ್ಡ್‌. ಪರ್ಮನೆಂಟ್‌ ಅಕೌಂಟ್‌ ನಂಬರ್‌ (Permanent Account Number) ಅನ್ನು ದೇಶದಲ್ಲಿ ಇದುವರೆಗೆ ಕಡ್ಡಾಯಗೊಳಿಸದಿದ್ದರೂ ಆರ್ಥಿಕ ವ್ಯವಹಾರಗಳಿಗೆ ಅತ್ಯಗತ್ಯ ದಾಖಲೆ ಎನಿಸಿಕೊಂಡಿದೆ. ಇದೀಗ ಕೇಂದ್ರ ಸರ್ಕಾರ ಪ್ಯಾನ್‌ ಕಾರ್ಡ್‌ ಅನ್ನು ಅಪ್‌ಡೇಟ್‌ ಮಾಡಲು ಮುಂದಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಪ್ಯಾನ್‌ 2.0 (PAN 2.0) ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದಕ್ಕಾಗಿ ಸುಮಾರು 1,435 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹಾಗಾದರೆ ಏನಿದು ಪ್ಯಾನ್‌ 2.0? ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ.

ಹಲವು ಆರ್ಥಿಕ ವ್ಯವಹಾರಗಳಿಗೆ ಪ್ಯಾನ್‌ ನಮೂದಿಸಲೇ ಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ, ಬ್ಯಾಂಕ್ ಖಾತೆ (Bank account), ಡಿಮ್ಯಾಟ್ ಖಾತೆ (Demat account) ತೆರೆಯುವಾಗ, ಮ್ಯೂಚಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ, ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಹೀಗೆ ವಿವಿಧ ಕಡೆಗಳಲ್ಲಿ ಪ್ಯಾನ್ ಕಾರ್ಡ್ ಪ್ರತಿ ನೀಡುವುದು ಕಡ್ಡಾಯ. ಅಲ್ಲದೆ ಬ್ಯಾಂಕ್‌ನಲ್ಲಿ 50,000 ರೂ.ಗಿಂತ ಅಧಿಕ ಹಣ ಜಮೆ ಮಾಡಬೇಕಾದರೂ ಪ್ಯಾನ್ ನಂಬರ್‌ ಉಲ್ಲೇಖಿಸಲೇ ಬೇಕಾಗುತ್ತದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ನೀಡುವ ಈ 10 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಹೊಸ ರೂಪದಲ್ಲಿ ಪ್ಯಾನ್‌ ಕಾರ್ಡ್‌ ಅನ್ನು ಹೊರ ತರಲು ಮುಂದಾಗಿದೆ.

ಏನಿದು ಪ್ಯಾನ್‌ 2.0?

ಪ್ಯಾನ್‌ 2.0 ಯೋಜನೆಗೆ ಇದೀಗ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ ಪ್ಯಾನ್‌ ಕಾರ್ಡ್‌ನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಅಂದರೆ ಹೊಸ ಪ್ಯಾನ್ 2.0 ಕಾರ್ಡ್‌ ಕ್ಯೂಆರ್ ಕೋಡ್ ಒಳಗೊಂಡಿರಲಾಗುತ್ತದೆ. ʼʼಮಧ್ಯಮ ವರ್ಗದ ಜನತೆ ಮತ್ತು ಚಿಕ್ಕ ಉದ್ಯಮಗಳಿಗೆ ಪ್ಯಾನ್‌ ಕಾರ್ಡ್‌ ಮುಖ್ಯ ದಾಖಲೆ ಎನಿಸಿಕೊಂಡಿದೆ. ಹೀಗಾಗಿ ಪ್ಯಾನ್‌ ಕಾರ್ಡ್‌ ಅನ್ನು ನಾವು ಅಪ್‌ಡೇಟ್‌ ಮಾಡುತ್ತಿದ್ದೇವೆ. ಈ ಯೋಜನೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈಗಿರುವ ಪ್ಯಾನ್‌ ಕಾರ್ಡ್‌ ಅನ್ನೇ ನವೀಕರಿಸಲಾಗುತ್ತದೆ. ಇದರಿಂದ ನಿಮ್ಮ ಪ್ಯಾನ್‌ ನಂಬರ್‌ ಬದಲಾಗುವುದಿಲ್ಲ. ಈಗಿರುವ ಕಾರ್ಡ್ ಅಸಿಂಧುಗೊಳ್ಳುವುದಿಲ್ಲ. ಅಪ್​ಗ್ರೇಡ್ ಆಗಿರುವ ಹೊಸ ಪ್ಯಾನ್ ಕಾರ್ಡ್ ಪಡೆದರೆ ಸಾಕುʼʼ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ನೀವೇನು ಮಾಡಬೇಕು?

ಹೊಸ ಪ್ಯಾನ್ ಕಾರ್ಡ್ ಪಡೆದರೆ ಅದರಲ್ಲಿ ಹಳೆಯ ಪ್ಯಾನ್ ನಂಬರ್ ಬದಲಾಗುವುದಿಲ್ಲ. ಕ್ಯೂಆರ್ ಕೋಡ್​ನಂತಹ ಹೊಸ ಫೀಚರ್​ ಅಳವಡಿಸಲಾಗುತ್ತದೆ. ಈಗಾಗಲೇ ದೇಶಾದ್ಯಂತ 78 ಕೋಟಿ ಪ್ಯಾನ್‌ ಕಾರ್ಡ್‌ಗಳಿದ್ದು, ಅವನ್ನು ಅಪ್‌ಡೇಟ್‌ ಮಾಡಲಾಗುತ್ತದೆ. ಇದಕ್ಕಾಗಿ ಶುಲ್ಕ ಪಾವತಿಸಬೇಕಾಗಿಲ್ಲ. ನೀವು ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಅಗತ್ಯವೂ ಇಲ್ಲ. ಬದಲಾಗಿ ಈಗಿರುವ ಕಾರ್ಡ್‌ ಅನ್ನು ಅಪ್‌ಡೇಟ್‌ ಮಾಡಿದರೆ ಸಾಕಾಗುತ್ತದೆ. ”ಪ್ಯಾನ್‌ 2.0 ಯೋಜನೆಯಡಿ ಭಾರತೀಯರು ಮತ್ತೆ ಹೊಸ ಪ್ಯಾನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಈ ಯೋಜನೆಯಡಿ ಈಗಾಗಲೇ ನೀಡಲಾದ ಪ್ಯಾನ್ ಕಾರ್ಡ್‌ಗಳನ್ನು ಕ್ಯೂಆರ್ ಕೋಡ್‌ನೊಂದಿಗೆ ಉಚಿತವಾಗಿ ನವೀಕರಿಸಲಾಗುವುದು” ಎಂದು ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Money Tips: 2 ಪ್ಯಾನ್‌ ಕಾರ್ಡ್‌ ಹೊಂದಿದ್ದರೆ ಈಗಲೇ ಒಂದನ್ನು ಕ್ಯಾನ್ಸಲ್‌ ಮಾಡಿ; ಇಲ್ಲದಿದ್ದರೆ ಕಾದಿದೆ ಭಾರಿ ದಂಡ