ಬೆಂಗಳೂರು: ಮಕ್ಕಳನ್ನು (Child) ಚೆನ್ನಾಗಿ ಬೆಳೆಸುವುದು ತುಂಬಾನೇ ಕಷ್ಟದ ಕೆಲಸ ಎನ್ನುವ ಮಾತಿದೆ. ಏಕೆಂದರೆ ಮೊದಲೆಲ್ಲ ಮಕ್ಕಳಿಗೆ ಮನೆ, ಶಾಲೆ ಮತ್ತು ಸ್ನೇಹಿತರನ್ನು(Friends) ಹೊರತುಪಡಿಸಿದರೆ ಬೇರೆ ಗೊತ್ತಿರುತ್ತಿರಲಿಲ್ಲ. ಆದರೆ ಈಗಿನ ಮಕ್ಕಳಿಗೆ ಊಟ ಮಾಡುವುದಕ್ಕೂ ಮೊಬೈಲ್ ಬೇಕು (Mobile), ಮಲಗುವುದಕ್ಕೂ ಮೊಬೈಲ್ ಬೇಕು, ಆಟವಾಡಲು ಸಹ ಮೊಬೈಲ್ ಬೇಕು. ಒಟ್ಟಿನಲ್ಲಿ ಹೇಳುವುದಾದರೆ ಮೊಬೈಲ್ ಇಲ್ಲದೆ ಮಕ್ಕಳು ಇರಲಾರರು ಎಂಬಂತಾಗಿದೆ (Parenting Tips).
ಜತೆಗೆ ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡವು ಹೆಚ್ಚುತ್ತಿದೆ. ಶೈಕ್ಷಣಿಕ ಒತ್ತಡಗಳು ಮತ್ತು ಡಿಜಿಟಲ್ ಪರದೆಯ ಮೇಲೆ ಹೆಚ್ಚು ಸಮಯ ಕಳೆಯುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಮಾನಸಿಕ ಸಮಸ್ಯೆಗಳು ದೀರ್ಘ ಕಾಲದಾಗಿದ್ದು, ಮಕ್ಕಳ ಬೆಳವಣಿಗೆಯನ್ನೇ ಕುಂಠಿತಗೊಳಿಸಬಲ್ಲದು. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯು ಕಳೆದ ಐದು ವರ್ಷಗಳಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲಿ 15% ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ. ಮಕ್ಕಳ ಮಾನಸಿಕ ಆರೋಗ್ಯ (Mental health)ದ ಕಾಪಾಡಲು ಶಿಕ್ಷಕ ವೃಂದ ಹಾಗೂ ಪೋಷಕರು ಮಕ್ಕಳ ಸಮಸ್ಯೆಗಳನ್ನು ಅರಿತು ಅದಕ್ಕೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.
‘ಹೇಗಪ್ಪಾ ಬೆಳೆಸುವುದು ಈ ಮಕ್ಕಳನ್ನ, ಈ ಎಲೆಕ್ಟ್ರಾನಿಕ್ ಸಾಧನಗಳಿಂದ ಮಕ್ಕಳನ್ನು ಹೇಗೆ ದೂರ ಮಾಡುವುದು’ ಎಂದು ಚಿಂತಿತರಾದ ಅನೇಕ ಪೋಷಕರು ತಮ್ಮ ಮಕ್ಕಳನ್ನು ಮಕ್ಕಳ ತಜ್ಞರ ಬಳಿಗೆ ಕರೆದೊಯ್ಯುವ ಪರಿಸ್ಥಿತಿ ಬಂದೊದಗಿದೆ. ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡುವ ಮೂಲಕ ಮತ್ತು ಅವರ ಶಾಲೆಯಲ್ಲಿ ನೀಡಿರುವಂತಹ ಹೋಂ ವರ್ಕ್ಗಳಲ್ಲಿ ಅವರಿಗೆ ಸಹಾಯ ಮಾಡುವ ಮೂಲಕ ಅವರ ದೈಹಿಕ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಅವರ ಮಾನಸಿಕ ಆರೋಗ್ಯವನ್ನು ಆಗಾಗ್ಗೆ ನಿರ್ಲಕ್ಷಿಸಲಾಗುತ್ತದೆ.
ಮಗುವಿನ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಸಲಹೆಗಳು
ಮಕ್ಕಳೊಂದಿಗೆ ಸಮಯ ಕಳೆಯಿರಿ
ನಿಮ್ಮ ಮಕ್ಕಳೊಂದಿಗೆ ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಿರಿ. ಏಕೆಂದರೆ ಇದು ಅವರೊಂದಿಗೆ ಬಂಧವನ್ನು ಬೆಸೆಯಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ವಸ್ತುಗಳಿಗಾಗಿ ಹಣವನ್ನು ಖರ್ಚು ಮಾಡುವ ಬದಲು, ಅವರೊಂದಿಗೆ ಸಮಯವನ್ನು ಕಳೆಯುವುದು ಹೆಚ್ಚು ಮುಖ್ಯ. ಇದರಿಂದ ಅವರಲ್ಲಿ ಸುರಕ್ಷಿತ ಮತ್ತು ಪ್ರೀತಿಪಾತ್ರರು ಎಂದು ಭಾವ ಮೂಡುತ್ತದೆ. ಅವರೊಟ್ಟಿಗೆ ಆಟವಾಡುವುದು, ಚಲನಚಿತ್ರವನ್ನು ನೋಡುವುದು ಅಥವಾ ತಮ್ಮ ದಿನವನ್ನು ಚರ್ಚಿಸುವುದು ಸೇರಿದಂತೆ ಒಟ್ಟಿಗೆ ಚಟುವಟಿಕೆಗಳನ್ನು ಮಾಡಲು ಪೋಷಕರು ಪ್ರತಿದಿನ ಸಮಯ ಮೀಸಲಿಡಬೇಕು.
ಮಕ್ಕಳ ಮಾತನ್ನು ಕೇಳಿ
ಅನೇಕ ಬಾರಿ, ಪೋಷಕರು ತಮ್ಮ ಮಕ್ಕಳು ಏನು ಹೇಳುತ್ತಾರೆ ಎಂಬುದನ್ನು ನಿರ್ಲಕ್ಷಿಸುತ್ತಾರೆ. ಏಕೆಂದರೆ ಅದು ಅವಶ್ಯಕವಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ ಪೋಷಕರಾದವರು ಹಾಗೆ ಅಂದುಕೊಳ್ಳುವುದು ಒಳ್ಳೆಯದಲ್ಲ. ಏಕೆಂದರೆ ಮಕ್ಕಳು ತಮ್ಮ ಭಾವನೆಗಳನ್ನು ತಮ್ಮ ಹೆತ್ತವರಿಗೆ ಮೌಖಿಕವಾಗಿ ಸಂವಹನ ಮಾಡಲು ಇಷ್ಟ ಪಡುತ್ತಿರುತ್ತಾರೆ. ಸರಿಯಾದ ಸಂವಹನ ಮಾರ್ಗಗಳನ್ನು ಆರಂಭದಲ್ಲಿ ರಚಿಸದಿದ್ದರೆ, ಮಕ್ಕಳು ತಮ್ಮ ಪೋಷಕರಿಂದ ಪ್ರಮುಖ ಮಾಹಿತಿಯನ್ನು ಮರೆ ಮಾಚುತ್ತಾರೆ. ಇದು ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.
ಮೆಚ್ಚುಗೆ ವ್ಯಕ್ತಪಡಿಸಿ
ಪ್ರತಿಯೊಬ್ಬ ಪೋಷಕರು ತಮ್ಮ ಮಗು ಮಾಡುವ ತಪ್ಪಿಗೆ ಸ್ವಲ್ಪವೂ ಯೋಚನೆ ಮಾಡದೆ ಛೀಮಾರಿ ಹಾಕುತ್ತಾರೆ ಮತ್ತು ಗದರಿಸುತ್ತಾರೆ. ಇದರ ಜತೆಗೆ ನೀವು ಅವರಲ್ಲಿರುವ ಒಳ್ಳೆಯತವನ್ನು ಹೊಗಳುವುದು ಸಹ ಅಷ್ಟೇ ಮುಖ್ಯ. ಇದನ್ನು ಮಾಡಿದಾಗ, ಇದು ಮಗುವಿಗೆ ಅತ್ಯುತ್ತಮ ನಡವಳಿಕೆಯ ಮೇಲೆ ಗಮನ ಹರಿಸಲು ಮತ್ತು ತಮ್ಮ ಬಗ್ಗೆ ಉತ್ತಮ ಭಾವನೆಯನ್ನು ಹೊಂದಲು ಸಹಾಯ ಮಾಡುತ್ತದೆ.
ಹೋಲಿಕೆ ಮಾಡಬೇಡಿ
ನಿಮ್ಮ ಮಗುವನ್ನು ಬೇರೆಯೊಬ್ಬರ ಮಗುವಿನೊಂದಿಗೆ ಹೋಲಿಸುವುದು ಒಳ್ಳೆಯದಲ್ಲ, ಏಕೆಂದರೆ ನೀವು ಹಾಗೆ ಮಾಡುವುದರಿಂದ ನಿಮ್ಮ ಮಗುವಿಗೆ ಕೀಳರಿಮೆ ಬೆಳೆಯಲು ಶುರುವಾಗುತ್ತದೆ. ನಿಮ್ಮ ಮಕ್ಕಳ ಆತ್ಮಗೌರವವನ್ನು ಹೆಚ್ಚಿಸಲು ಸ್ನೇಹಿತರು ಮತ್ತು ಒಡಹುಟ್ಟಿದವರೊಂದಿಗೆ ಹೋಲಿಸುವ ಬದಲು ಅವರ ಅನನ್ಯವಾದ ಗುಣಗಳ ಬಗ್ಗೆ ಮಾತಾಡಿ ಮತ್ತು ಅವರಿಗಿರುವ ಗುರಿಗಳನ್ನು ಸಾಧಿಸಲು ಅವರನ್ನು ಪ್ರೇರೇಪಿಸಿ. ಮಗುವು ಒಂದು ಸಣ್ಣ ಸಾಧನೆ ಮಾಡಿದರೂ ಸಹ ಅದರ ಪ್ರಯತ್ನಗಳಿಗಾಗಿ ಶ್ಲಾಘಿಸುವುದು ಮತ್ತು ರಚನಾತ್ಮಕ ಚರ್ಚೆಗಳ ಮೂಲಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುವುದು ಅತ್ಯಗತ್ಯ.
ಒತ್ತಡ ನಿರ್ವಹಣೆ ಕುರಿತು ತಿಳಿಸಿ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡ ಮತ್ತು ಆತಂಕವು ಬಹುತೇಕ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ನಾವು ಹೊರ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ, ನಾವು ನಮ್ಮ ಮಕ್ಕಳಿಗೆ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ಕಲಿಸಬಹುದು, ಅದು ಈ ಒತ್ತಡವನ್ನು ಬಲವಂತವಾಗಿ ನಿಭಾಯಿಸಲು ಅವರಿಗೆ ಸಹಾಯ ಮಾಡುತ್ತದೆ. ಒತ್ತಡವನ್ನು ನಮ್ಮ ಜೀವನದ ಒಂದು ಭಾಗವಾಗಿ ಸ್ವೀಕರಿಸುವುದನ್ನು ಅವರಿಗೆ ಹೇಳಿಕೊಡಬೇಕು.
ಆರಂಭದ ಹಂತದಲ್ಲಿ ನಿಮ್ಮ ಮಗುವಿಗೆ ಕುಟುಂಬ ಮತ್ತು ಸ್ನೇಹಿತರಿಂದ ಎದುರಾಗುವ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲು ಕಲಿಸಿ. ಇದರಿಂದ ಅವರು ತಮ್ಮ ಜೀವನದಲ್ಲಿ ಎದುರಿಸುವ ಒತ್ತಡ ಮತ್ತು ಆತಂಕವನ್ನು ಅವರ ಒಟ್ಟಾರೆ ಸಕಾರಾತ್ಮಕ ದೃಷ್ಟಿಕೋನದ ಮೇಲೆ ಪರಿಣಾಮ ಬೀರದಂತೆ ನಿರ್ವಹಿಸಬಹುದು.
ಈ ಸುದ್ದಿಯನ್ನು ಓದಿ: Health Tips: ಅತಿಯಾಗಿ ಕಾಫಿ ಸೇವಿಸಿದರೆ ಆತಂಕದ ಕಾಯಿಲೆ!