Thursday, 2nd January 2025

Pawan Kalyan: ಅಲ್ಲು ಅರ್ಜುನ್ ವಿರುದ್ಧದ ಕ್ರಮ ಸರಿಯಾಗಿದೆ; ರೇವಂತ್‌ ರೆಡ್ಡಿ ಪರ ಪವನ್ ಕಲ್ಯಾಣ್ ಅಚ್ಚರಿ ಹೇಳಿಕೆ!

ಹೈದರಾಬಾದ್:‌ ಥಿಯೇಟರ್‌ ಕಾಲ್ತುಳಿತ(Stampede) ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್(Allu Arjun) ವಿರುದ್ಧದ ಕ್ರಮಕ್ಕೆ ತೆಲಂಗಾಣ(Telangana) ಪೊಲೀಸರನ್ನು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್(Pawan Kalyan) ಬೆಂಬಲಿಸಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿರುವುದರಿಂದ ಪೊಲೀಸರು ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಎನ್‌ಡಿಎ ಮೈತ್ರಿಕೂಟದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಈ ಮಧ್ಯೆ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ(Revanth Reddy) ಅವರನ್ನು “ಮಹಾನ್ ನಾಯಕ” ಎಂದು ಹೊಗಳಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲು ಅರ್ಜುನ್ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬವನ್ನು ಭೇಟಿ ಮಾಡಬೇಕಿತ್ತು ಎಂದು ಹೇಳಿರುವುದು ತಿಳಿದು ಬಂದಿದೆ.

ಮಂಗಳಗಿರಿಯಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ಮಾತನಾಡಿದರು. ಅಲ್ಲು ಅರ್ಜುನ್ ತಮ್ಮ ಪುಷ್ಪ 2 ಚಿತ್ರದ ಪ್ರೀಮಿಯರ್‌ ಶೋ ವೇಳೆ ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದ್ದರು. ಅಲ್ಲು ಅರ್ಜುನ್‌ ಆಗಮನದಿಂದಾಗಿ ಸ್ಥಳದಲ್ಲಿ ನೂಕು ನುಗ್ಗಲು ನಡೆದಿತ್ತು. ಘಟನೆಯಲ್ಲಿ 35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದು, ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ನಡೆದ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು. ತೆಲಂಗಾಣ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿತು.

ಕಾನೂನು ಜಾರಿ ಅಧಿಕಾರಿಗಳು ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯ ಎಂದು ಪವನ್ ಕಲ್ಯಾಣ್ ಇಂದು ಹೇಳಿದ್ದಾರೆ. ಕಾನೂನು ಎಲ್ಲರಿಗೂ ಸಮಾನ. ಇಂತಹ ಘಟನೆಗಳಲ್ಲಿ ಪೊಲೀಸರು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ವರ್ತಿಸುತ್ತಾರೆ. ಆದರೆ, ಥಿಯೇಟರ್ ಸಿಬ್ಬಂದಿ ಅಲ್ಲು ಅರ್ಜುನ್‌ಗೆ ಪರಿಸ್ಥಿತಿಯ ಬಗ್ಗೆ ಮುಂಚಿತವಾಗಿ ತಿಳಿಸಬೇಕಿತ್ತು ಎಂದು ಮಾತನಾಡಿದರು. ಈ ಮಧ್ಯೆ ಪವನ್‌ ಕಲ್ಯಾಣ್‌ ಮುಖ್ಯಂತ್ರಿ ರೇವಂತ್‌ ರೆಡ್ಡಿ ಅವರನ್ನು ಶ್ಲಾಘಿಸಿದ್ದು”ಅವರು ವಿನಮ್ರತೆಯಿಂದ ಬೆಳೆದವರು.ರೇವಂತ್ ರೆಡ್ಡಿ ಒಬ್ಬ ಮಹಾನ್ ನಾಯಕ” ಎಂದು ಬಣ್ಣಿಸಿದ್ದಾರೆ. ಅವರು ವೈಎಸ್‌ಆರ್‌ಸಿಯಂತೆ ಮಾಡಲಿಲ್ಲ. ಅವರು ಬೆನಿಫಿಟ್ ಶೋ ಮತ್ತು ಟಿಕೆಟ್ ದರ ಏರಿಕೆಗೆ ಅವಕಾಶ ಮಾಡಿಕೊಟ್ಟರು. ಆದರೆ, ಈ ಪ್ರಕರಣದಲ್ಲಿ ಅಲ್ಲು ಜೊತೆ ಮತ್ತು ತೆರೆಮರೆಯಲ್ಲಿ ಅಥವಾ ಹಿಂದೆ ಏನಾಯಿತು ಎಂಬುದರ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ಪವನ್‌ ಕಲ್ಯಾಣ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸುದ್ದಿಯನ್ನೂ:Obscene Video: ತರಗತಿಯಲ್ಲೇ ಕುಳಿತು ಅಶ್ಲೀಲ ವಿಡಿಯೊ ವೀಕ್ಷಿಸಿದ ಮಾನಗೆಟ್ಟ ಶಿಕ್ಷಕ; ನೋಡಿ ನಕ್ಕ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ!