ಹೈದರಾಬಾದ್: ಬಾಂಗ್ಲಾದೇಶದ ಹಿಂದೂ ಮುಖಂಡ, ಇಸ್ಕಾನ್ (ISKCON) ಸದಸ್ಯ ಕೃಷ್ಣ ದಾಸ್ ಬ್ರಹ್ಮಚಾರಿ (Krishna Das Brahmachari) ಅವರ ಬಂಧನ ಮತ್ತು ಜಾಮೀನು ನಿರಾಕರಣೆಯನ್ನು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್(Pawan Kalyan) ಖಂಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪವನ್ ಕಲ್ಯಾಣ್, ನೆರೆಯ ದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವಂತೆ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು ಆಗ್ರಹಿಸಿದ್ದಾರೆ. ಇನ್ನು ಅವರು ಇದೇ ವೇಳೆ ಬಾಂಗ್ಲಾದೇಶದ ರಚನೆಗೆ ಭಾರತದ ಕೊಡುಗೆಯನ್ನು ಸ್ಮರಿಸಿದರು. ಬಾಂಗ್ಲಾದೇಶವನ್ನು ಪಾಕಿಸ್ತಾನದ ಹಿಡಿತದಿಂದ ಮುಕ್ತಗೊಳಿಸಲು ಭಾರತೀಯ ಸೇನಾ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಇಸ್ಕಾನ್ ಮುಖಂಡ ಚಿನ್ಮೋಯ್ ಕೃಷ್ಣ ದಾಸ್’ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿರುವುದನ್ನು ಖಂಡಿಸಲು ನಾವೆಲ್ಲರೂ ಒಂದಾಗೋಣ. ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವಂತೆ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ ಮತ್ತು ಮನವಿ ಮಾಡುತ್ತೇವೆ. ಬಾಂಗ್ಲಾದೇಶ ರಚನೆಗಾಗಿ ಭಾರತೀಯ ಸೇನೆಯ ರಕ್ತ ಚೆಲ್ಲಿದೆ, ನಮ್ಮ ಸಂಪನ್ಮೂಲಗಳನ್ನು ವ್ಯಯಿಸಲಾಗಿದೆ, ನಮ್ಮ ಸೇನಾ ಯೋಧರ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಮ್ಮ ಹಿಂದೂ ಸಹೋದರ ಸಹೋದರಿಯರನ್ನು ಗುರಿಯಾಗಿಸಲಾಗುತ್ತಿರುವ ರೀತಿಯಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ ಎಂದು ಪೋಸ್ಟ್‌ನಲ್ಲಿ ಕಿಡಿ ಕಾರಿದ್ದಾರೆ.
ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್ ಆಗಿದ್ದೇಕೆ?
ಸಂತ ಚಿನ್ಮಯ್ ಕೃಷ್ಣ ದಾಸ ಪ್ರಭು ಅವರನ್ನು ಢಾಕಾದ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಯಿತು. ಚಿತ್ತಗಾಂಗ್‌ಗೆ ಅವರು ಹೊರಟಿದ್ದರು. ಬಾಂಗ್ಲಾದೇಶದ ಬಾವುಟಕ್ಕೆ ಅಗೌರವ ತೋರಿಸಿದ್ದಾರೆ ಎಂದು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ಮುಖಂಡರೊಬ್ಬರಿಂದ ಕಳೆದ ತಿಂಗಳು ದೂರು ಸಲ್ಲಿಸಲಾಗಿತ್ತು. ಈ ದೂರಿನ ಅಧಾರದಲ್ಲಿ ಅರೆಸ್ಟ್ ಮಾಡಲಾಗಿದ್ದು, ದೇಶದ್ರೋಹದ ಆಪಾದನೆ ಮಾಡಲಾಗಿದೆ. ಕೋರ್ಟ್‌ನಲ್ಲಿ ಜಾಮೀನು ನಿರಾಕರಿಸಲಾಗಿದೆ.
ಇಸ್ಕಾನ್ ಜತೆಗೆ ಗುರುತಿಸಿಕೊಂಡಿರುವ ಚಿನ್ಮಯ್ ಕೃಷ್ಣದಾಸ್ ಅವರು ಬಾಂಗ್ಲಾದೇಶದಲ್ಲಿ ಕೆಲವು ತಿಂಗಳಲ್ಲೇ ಹಿಂದೂಗಳ ನಾಯಕರಾಗಿ ಹೊರಹೊಮ್ಮಿದ್ದಾರೆ.
ಪ್ರಭು ಪ್ರಣಾಮ್ ಎಂದು ಅತ್ಮೀಯವಾಗಿ ಜನರೊಡನೆ ಬೆರೆಯುವ ಕೃಷ್ಣದಾಸ್, ಸಾರ್ವಜನಿಕ ಸಭೆಗಳಲ್ಲಿ ಹಿಂದೂಗಳ ಸುರಕ್ಷತೆ ಬಗ್ಗೆ ಜನ ಜಾಗೃತಿಯನ್ನೂ ಮೂಡಿಸುತ್ತಿದ್ದರು. ಅವರ ಬಹಿರಂಗ ಸಭೆಗಳಿಗೆ ಅಪಾರ ಸಂಖ್ಯೆಯಲ್ಲಿ ಹಿಂದೂಗಳು ಸೇರುತ್ತಿದ್ದರು. ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನವಾದ ಬಳಿಕ ಇಸ್ಕಾನ್ ಸೇರಿ ಹಿಂದೂ ದೇವಾಲಯಗಳ ಮೇಲೆ ದಾಳಿ ಜೋರಾದ ಬಳಿಕ, ಚಿನ್ಮಯ ಕೃಷ್ಣದಾಸ್ ಅವರು ಹಿಂದೂ ಸಂಘಟನೆಗೆ ಸಕ್ರಿಯರಾಗಿದ್ದರು. ಇದು ಅಲ್ಲಿನ ಹಂಗಾಮಿ ಸರ್ಕಾರಕ್ಕೆ ತಲೆ ನೋವಾಗಿತ್ತು. ಅವರು ಇಸ್ಲಾಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಯಾವುದಕ್ಕೂ ಧೃತಿಗೆಡದ ಚಿನ್ಮಯ್ ಕೃಷ್ಣದಾಸ್, ಮುಸ್ಲಿಂ ಮೆಜಾರಿಟಿಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸಿದರು.
38 ವರ್ಷ ವಯಸ್ಸಿನ ಸಂನ್ಯಾಸಿ ಚಿನ್ಮಯ್ ಕೃಷ್ಣದಾಸ್ ಅವರು ಇತ್ತೀಚೆಗೆ ರಚಿಸಲಾಗಿದ್ದ ಹಿಂದೂ ಪರ ಸಂಘಟನೆಯಾದ ಸನಾತನ್ ಜಾಗರಣ್ ಜೋಟ್ ವೇದಿಕೆಯ ವಕ್ತಾರರಾಗಿದ್ದರು. ಈ ವೇದಿಕೆಯು ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ಪರ ಹೋರಾಡುತ್ತಿದೆ. ಇದು ಅಲ್ಲಿನ ಎಲ್ಲ ಹಿಂದೂ ಪರ ಸಂಘಟನೆಗಳ ಒಕ್ಕೂಟವಾಗಿದೆ. ಹೀಗಾಗಿ ಮಹತ್ವ ಪಡೆದುಕೊಂಡಿದೆ. ಚಿಟ್ಟಗಾಂಗ್‌ನಲ್ಲಿ ಪುಂಡರೀಕ ಧಾಮ್ ಎಂಬ ಧಾರ್ಮಿಕ ಕೇಂದ್ರದ ಅಧ್ಯಕ್ಷರಾಗಿಯೂ ಚಿನ್ಮಯ ಕೃಷ್ಣದಾಸ್ ಸೇವೆ ಸಲ್ಲಿಸುತ್ತಿದ್ದಾರೆ. ಪುಂಡರೀಕ ಧಾಮವು ಬಾಂಗ್ಲಾದೇಶದ ಹಿಂದೂಗಳಿಗೆ ಪವಿತ್ರ ಯಾತ್ರಾ ಸ್ಥಳಗಳಲ್ಲೊಂದಾಗಿದೆ.
ಹಿಂದೂ ಸಂತನ ಬಂಧನಕ್ಕೆ ಭಾರತ ಖಂಡನೆ
ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನವನ್ನು ಭಾರತ ಅಧಿಕೃತವಾಗಿ ಖಂಡಿಸಿದ್ದು, ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿಕೆ ಬಿಡುಗಡೆಗೊಳಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮನೆ ಮಠಗಳನ್ನು ಲೂಟಿ ಮಾಡಲಾಗಿದೆ. ಉದ್ದಿಮೆಗಳನ್ನು ನಾಶಪಡಿಸಲಾಗಿದೆ. ಹಿಂದೂ ದೇವಾಲಯಗಳ ಮೇಲಿನ ದಾಳಿಯೂ ದುರದೃಷ್ಟಕರ. ಶಾಂತಿಯುತವಾಗಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಡುತ್ತಿದ್ದ ಇಸ್ಕಾನ್‌ನ ಸಂತ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಅರೆಸ್ಟ್ ಮಾಡಿರುವುದು ಮತ್ತು ಜಾಮೀನು ನಿರಾಕರಿಸಿರುವುದು ತೀವ್ರ ಕಳವಳ ಮೂಡಿಸಿದೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ. ಜತೆಗೆ ಬಾಂಗ್ಲಾದೇಶದಲ್ಲಿರುವ ಎಲ್ಲ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಗೆ ಕ್ರಮ ಕೈಗೊಳ್ಳಲೇಬೇಕು ಎಂದು ವಿದೇಶಾಂಗ ಇಲಾಖೆ ಆಗ್ರಹಿಸಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಈ ಹಿಂದೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು.
ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಬೃಹತ್ ರ‍್ಯಾಲಿ; ವಿವಿಧ ಬೇಡಿಕೆಗಳಿಗೆ ಒತ್ತಾಯ