Sunday, 22nd December 2024

Physical Abuse: ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ರೆಸ್ಟ್‌ ಹೌಸ್‌ಗೆ ಕರೆದ ಪಿಡಬ್ಲ್ಯೂಡಿ ಎಂಜಿನಿಯರ್‌; ಮುಂದೇನಾಯ್ತು? ವಿಡಿಯೊ ಇದೆ

Physical Abuse

ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ಪಿಡಬ್ಲ್ಯೂಡಿ ಸಬ್ ಎಂಜಿನಿಯರ್ ತನ್ನ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ(Physical Abuse) ನೀಡಲು ಯತ್ನಿಸಿದ್ದು, ಇದಕ್ಕೆ ಪ್ರತಿಯಾಗಿ ಯುವತಿ ಆತನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. ಈ ಘಟನೆ ಇತ್ತೀಚೆಗೆ ನಡೆದಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರೋಪಿ ಪಿಡಬ್ಲ್ಯೂಡಿ ಉದ್ಯೋಗಿಯನ್ನು ದಾಟಿಯಾ ನಿವಾಸಿ ಮತ್ತು ದಾಬ್ರಾದಲ್ಲಿ ನೇಮಕಗೊಂಡ ಸಬ್ ಎಂಜಿನಿಯರ್ ರಾಮ್ ಸ್ವರೂಪ್ ಕುಶ್ವಾಹ ಎಂದು ಗುರುತಿಸಲಾಗಿದೆ. ಉದ್ಯೋಗದ ಹೆಸರಿನಲ್ಲಿ ತನಗೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಯುವತಿ ಇನ್ನೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.  ದೂರು ಬಂದ ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಾಬ್ರಾ ಠಾಣಾ ಪೊಲೀಸರು ತಿಳಿಸಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ, ಎಂಜಿನಿಯರ್ ಸಾಕಷ್ಟು ತೊಂದರೆ ನೀಡಿದ್ದಾನೆ ಮತ್ತು ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಹೇಳಿದ್ದಾರೆ. ವಿಡಿಯೊದಲ್ಲಿ ಯುವತಿ  ಆರೋಪಿ ಎಂಜಿನಿಯರ್‌ಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.  ನಂತರ ಯುವತಿ ಎಂಜಿನಿಯರ್‌ ಅನ್ನು ವಿಶ್ರಾಂತಿ ಗೃಹದ ಹೊರಗೆ ಎಳೆದುಕೊಂಡು ಹೋಗಿ ಅಲ್ಲಿಯೂ ಥಳಿಸಿದ್ದಾರಂತೆ.

ಮಾಹಿತಿಯ ಪ್ರಕಾರ, ಕುಶ್ವಾಹ  ಪರಿಚಯಸ್ಥರೊಬ್ಬರು, ಕೆಲಸದ ಅಗತ್ಯವಿರುವ ಯುವತಿಗೆ  ಆತನನ್ನು ಪರಿಚಯಿಸಿದ್ದಾರೆ ಮತ್ತು ಪ್ರತಿಯಾಗಿ ಅವರು ಉದ್ಯೋಗದ ಭರವಸೆ ನೀಡಿದ್ದಾರೆ.  ರಾಮ್ ಸ್ವರೂಪ್ ಕುಶ್ವಾಹ ಸಂಜೆಯ ವೇಳೆ ಕೆಲಸದ ನೆಪದಲ್ಲಿ ಯುವತಿಯನ್ನು ದಬ್ರಾ ರೆಸ್ಟ್ ಹೌಸ್‍ಗೆ ಕರೆದಿದ್ದಾನೆ. ನಂತರ ಯುವತಿಯನ್ನು ತನ್ನ ಕೋಣೆಯೊಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ. ಕೋಪಗೊಂಡ ಯುವತಿ ತನ್ನ ಚಪ್ಪಲಿಯನ್ನು ಹೊರತೆಗೆದು ಅವನನ್ನು ಹೊಡೆಯಲು ಶುರುಮಾಡಿದ್ದಾಳೆ. ಎಂಜಿನಿಯರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಯುವತಿ ಆತನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾಳೆ

ಈ ಸುದ್ದಿಯನ್ನೂ ಓದಿ: ಬ್ಯಾಂಕ್ ಮ್ಯಾನೇಜರ್‌ ಮೇಲೆ ಹಲ್ಲೆ ನಡೆಸಿದ ಗ್ರಾಹಕ; ಭಯಾನಕ ವಿಡಿಯೊ ನೋಡಿ

ವಿಡಿಯೊ ವೈರಲ್ ಆದ ನಂತರ, ಪೊಲೀಸರು ಸ್ಥಳಕ್ಕೆ ಬಂದು ಯುವತಿಯನ್ನು ಭೇಟಿ ಮಾಡಿದರೂ  ಕೂಡ ಆಕೆ ಯಾವುದೇ ದೂರು ದಾಖಲಿಸಲಿಲ್ಲ. ಆದರೆ ಯುವತಿ ಯಾವುದೇ ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.