Wednesday, 8th January 2025

Physical Assault: ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ; ಆರೋಪಿ ಅರೆಸ್ಟ್!

ಭೋಪಾಲ್:‌ ಕೋಲ್ಕತ್ತಾ ಕಿರಿಯ ವೈದ್ಯ ಅತ್ಯಾಚಾರ ಕೊಲೆ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಮಧ್ಯಪ್ರದೇಶದ(Madhya Pradesh) ಗ್ವಾಲಿಯರ್(Gwalior) ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ 25 ವರ್ಷದ ಕಿರಿಯ ವೈದ್ಯೆಯೊಬ್ಬರ ಮೇಲೆ ಆಕೆಯ ಸಹೋದ್ಯೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಸದ್ಯ ಆರೋಪಿಯನ್ನು ಬಂಧಿಸಲಾಗಿದೆ(Physical Assault).

ಸಂತ್ರಸ್ತ ವೈದ್ಯೆ ಗ್ವಾಲಿಯರ್ ವೈದ್ಯಕೀಯ ಕಾಲೇಜಿನ ಹುಡುಗಿಯರ ಹಾಸ್ಟೆಲ್‌ನಲ್ಲಿ ನೆಲೆಸಿದ್ದರು. ಹುಡುಗರ ಹಾಸ್ಟೆಲ್‌ಗೆ ಕರೆಸಿಕೊಂಡು ಆರೋಪಿಯು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿಯು ಒಂದೇ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಂದೇ ಕಡೆ ಕೆಲಸ ಕೂಡ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಘಟನೆ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಜಾಡೋನ್, “ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಜೊತೆಗೆ ಇಬ್ಬರೂ ಆಸ್ಪತ್ರೆಯ ಹಾಸ್ಟೆಲ್ ಗಳಲ್ಲಿ ನೆಲೆಸಿದ್ದರು” ಎಂದಿದ್ದಾರೆ. “ಭಾನುವಾರ(ಜ.5) ಆರೋಪಿ ಸಂತ್ರಸ್ತೆಯನ್ನು ತಾನಿರುವ ಹಾಸ್ಟೆಲ್ ಬಳಿ ಮಾತನಾಡಲು ಬರುವಂತೆ ಹೇಳಿದ್ದಾನೆ ಅದರಂತೆ ಸಂತ್ರಸ್ತೆ ಹುಡುಗರ ಹಾಸ್ಟೆಲ್ ಬಳಿ ಬಂದಿದ್ದಾಳೆ ಈ ವೇಳೆ ಆಕೆಯನ್ನು ಬೆದರಿಸಿ ಆಕೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಘಟನೆ ಸಂಬಂಧ ಸಂತ್ರಸ್ತೆ ಇಲ್ಲಿನ ಕಂಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದೇವೆ” ಎಂದು ಸುದ್ದಿಗಾರರಿಗೆ ಅಶೋಕ್‌ ತಿಳಿಸಿದ್ದಾರೆ.

ಬ್ಯೂಟಿಷಿಯನ್ ಮೇಲೆ ಅತ್ಯಾಚಾರ

ಕಳೆದ ತಿಂಗಳಷ್ಟೇ ಬ್ಯೂಟಿಷಿಯನ್ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ ಒಬ್ಬನನ್ನು ಜಿಲ್ಲೆಯ ಸಾತನೂರು ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಸೊರನಹಳ್ಳಿ ಚೆಲುವರಾಮು (32) ಎಂದು ಗುರುತಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಸಂತ್ರಸ್ತೆಯು ಸಾತನೂರಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಬ್ಯಾಂಕ್ ಸಾಲಕ್ಕಾಗಿ ಎದುರು ನೋಡುತ್ತಿದ್ದ ಆಕೆ ಸ್ನೇಹಿತೆಯ ಮೂಲಕ ಆರೋಪಿಯ ಸಂಪರ್ಕಕ್ಕೆ ಬಂದಿದ್ದರು. ಆರೋಪಿ ತನ್ನ ಸಂಪರ್ಕಗಳ ಮೂಲಕ ಸಾಲ ಕೊಡಿಸುವುದಾಗಿ ಆಕೆಗೆ ಭರವಸೆ ನೀಡಿದ್ದ. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿ ಸಾಲ ಕೊಡಿಸುವ ನೆಪದಲ್ಲಿ ಆಕೆಯನ್ನು ರಾಮನಗರದ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ಸಂತ್ರಸ್ತೆ ದೂರು ದಾಖಲಿಸಿದ್ದರು. ಸಂತ್ರಸ್ತೆಗೆ ಆರೋಪಿಯನ್ನು ಪರಿಚಯಿಸುವಲ್ಲಿ ಪರಸ್ಪರ ಸ್ನೇಹಿತನ ಪಾತ್ರವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸಿದ್ದರು. ಆರೋಪಿಯ ವಿರುದ್ಧ ಅತ್ಯಾಚಾರ (ಬಿಎನ್‌ಎಸ್ 64), ಲೈಂಗಿಕ ಕಿರುಕುಳ (ಬಿಎನ್‌ಎಸ್ 75), ಮಹಿಳೆಯ ಮೇಲಿನ ದೌರ್ಜನ್ಯ (ಬಿಎನ್‌ಎಸ್ 76) ಜತೆಗೆ ಬಿಎನ್‌ಎಸ್‌ನ ಇತರ ವಿಭಾಗಗಳಲ್ಲಿ ದಾಖಲಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ:Physical Abuse: ಕಸ್ಟಮರ್‌ ಕೇರ್‌ನಲ್ಲಿ ಪರಿಚಯ, ಹೋಟೆಲ್‌ಗೆ ಕರೆದೊಯ್ದುಅತ್ಯಾಚಾರ: ಯುವಕನ ಮೇಲೆ ಯುವತಿಯ ದೂರು

Leave a Reply

Your email address will not be published. Required fields are marked *