ತಿರುವನಂತಪುರಂ: ಬಹಳ ವರ್ಷಗಳಿಂದ ಕೇರಳದಲ್ಲಿ ಚಾಲ್ತಿಯಲ್ಲಿರುವ ದೇಗುಲಕ್ಕೆ ಪ್ರವೇಶಿಸುವ ಮುನ್ನ ಪುರುಷರು ಮೇಲ್ವಸ್ತ್ರ (ಶರ್ಟ್, ಟೀಶರ್ಟ್, ಬನಿಯನ್) ಕಳಚುವ ಪದ್ಧತಿಯನ್ನು ರದ್ದುಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಮೇಲ್ವಸ್ತ್ರ ತೆಗೆಯುವ ಸಂಪ್ರದಾಯ ಸಾಮಾಜಿಕ ಅನಿಷ್ಟವಾಗಿದ್ದು, ಇದನ್ನು ಕಿತ್ತು ಹಾಕಬೇಕು ಎಂದು ಶ್ರೀ ನಾರಾಯಣ ಗುರು ಸ್ಥಾಪಿತ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಪಿಣರಾಯಿ ವಿಜಯನ್ ಈ ಬಗ್ಗೆ ಮಾತನಾಡಿದ್ದು, ಹಲವರು ಈ ನಡೆಯನ್ನು ಟೀಕಿಸಿದ್ದಾರೆ. ಕೇರಳದ ಪ್ರಭಾವಶಾಲಿ ನಾಯರ್ ಸಮುದಾಯದ ಸಂಸ್ಥೆ ನಾಯರ್ ಸರ್ವಿಸ್ ಸೊಸೈಟಿ (NSS) ಮತ್ತು ಬಿಜೆಪಿ (BJP) ವಾಗ್ದಾಳಿ ನಡೆಸಿದೆ.
ʼʼಪ್ರತಿಯೊಂದು ದೇಗುಲ ತನ್ನದೇ ಆದ ಆಚಾರ-ವಿಚಾರ, ಸಂಪ್ರದಾಯವನ್ನು ಹೊಂದಿದೆ. ಇದನ್ನು ಬದಲಾಯಿಸಬೇಕೆಂದು ಆಗ್ರಹಿಸುವುದು ಎಷ್ಟು ಸರಿ?ʼʼ ಎಂದು ಎನ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಗಿ.ಸುಕುಮಾರ್ ನಾಯರ್ ಪ್ರಶ್ನಿಸಿದ್ದಾರೆ. ದೇಗುಲಕ್ಕೆ ಪ್ರವೇಶಿಸುವ ಮುನ್ನ ಪುರುಷರು ಮೇಲ್ವಸ್ತ್ರ ತೆಗೆಯುವ ಸಂಪ್ರದಾಯವನ್ನು ಕಿತ್ತೊಗೆಯಬೇಕು ಎನ್ನುವ ಶಿವಗಿರಿ ಮಠದ ಅಧ್ಯಕ್ಷ ಸ್ವಾಮಿ ಸಚ್ಚಿದಾನಂದ ಅವರ ಸಲಹೆಯನ್ನು ಬೆಂಬಲಿಸಿದ ಪಿಣರಾಯಿ ವಿಜಯನ್ ನಡೆಯನ್ನೂ ಅವರು ಟೀಕಿಸಿದ್ದಾರೆ.
Protests are intensifying across Kerala as INDI CM Pinarayi Vijayan outrageously tried to Undermine the faith and insult the contribution of Sree Naryana Guru.
— BJP KERALAM (@BJP4Keralam) January 2, 2025
Congress Kerala State President @KSudhakaranINC has also endorsed this stance, exposing their collective agenda of INDI… pic.twitter.com/cHQhk2jKGy
ʼʼಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯ ತಮ್ಮದೇ ಆದ ಸಂಪ್ರದಾಯ, ಆಚರಣೆಯನ್ನು ಹೊಂದಿದೆ. ಆದರೆ ಇವನ್ನು ಆಧುನಿಕತೆಗೆ ತಕ್ಕಂತ ಬದಲಾಯಿಸಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಈ ಸಮುದಾಯಗಳ ಸಂಪ್ರದಾಯವನ್ನು ಟೀಕಿಸುವ ಧೈರ್ಯವಿದೆಯೇ? ಅವರ ಹಿಂದೂಗಳನ್ನು ಮಾತ್ರ ಗುರಿಯಾಗಿಸಿಕೊಂಡು ಟೀಕಿಸುತ್ತಿದ್ದಾರೆʼʼ ಎಂದು ಕಿಡಿ ಕಾರಿದ್ದಾರೆ.
ಏನಿದು ವಿವಾದ?
ಶಿವಗಿರಿ ಮಠವು ಕೇರಳದ ಈಳವ ಹಿಂದೂ ಸಮುದಾಯದ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಈಳವ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಸೇರಿಸಲಾಗಿದೆ. ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಮತ್ತು ಕೆಳಜಾತಿಯವರಿಗೆ ದೇವಾಲಯಗಳಿಗೆ ಪ್ರವೇಶಿಸುವ ಹಕ್ಕನ್ನು ಪ್ರತಿಪಾದಿಸಿದ ಶ್ರೀ ನಾರಾಯಣ ಗುರು ಅವರು ಈ ಮಠವನ್ನು ತಿರುವನಂತಪುರಂನ ವರ್ಕಲಾದಲ್ಲಿ 1904ರಲ್ಲಿ ಸ್ಥಾಪಿಸಿದರು.
ಮಂಗಳವಾರ (ಡಿ. 31) ಮಠದಲ್ಲಿ ನಡೆದ ವಾರ್ಷಿಕ ಶಿವಗಿರಿ ತೀರ್ಥಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಸ್ವಾಮಿ ಸಚ್ಚಿದಾನಂದ, “ಪುರುಷರು ದೇವಾಲಯಗಳಿಗೆ ಪ್ರವೇಶಿಸುವ ಮೊದಲು ತಮ್ಮ ಮೇಲ್ವಸ್ತ್ರವನ್ನು ತೆಗೆದುಯುವುದು ಕೆಟ್ಟ ಸಂಪ್ರದಾಯ. ಈ ಹಿಂದೆ ಪೂನೂಲ್ (ಜನಿವಾರ) ಕಾಣುವುದನ್ನು ಖಚಿತಪಡಿಸಿಕೊಳ್ಳಲು ಈ ಅಭ್ಯಾಸವನ್ನು ಪ್ರಾರಂಭಿಸಲಾಯಿತು. ಆ ಪದ್ಧತಿ ಇಂದಿಗೂ ದೇವಾಲಯಗಳಲ್ಲಿ ಮುಂದುವರಿದಿದೆ. ಶ್ರೀ ನಾರಾಯಣ ಸಮಾಜವು ಆ ಅಭ್ಯಾಸವನ್ನು ಬದಲಾಯಿಸಬೇಕೆಂದು ಬಯಸುತ್ತದೆʼʼ ಎಂದು ಹೇಳಿದ್ದರು. ಈ ವೇಳೆ ಉಪಸ್ಥಿತರಿದ್ದ ಸಿಎಂ ವಿಜಯನ್, ಶ್ರೀಗಳ ಕರೆಗೆ ಸಹಮತ ವ್ಯಕ್ತಪಡಿಸಿದ್ದರು.
ಬಿಜೆಪಿಯಿಂದಲೂ ವಾಗ್ದಾಳಿ
ಎನ್‌ಎಸ್‌ಎಸ್ ಬೆನ್ನಲ್ಲೇ ಬಿಜೆಪಿಯೂ ವಿಣರಾಯಿ ವಿಜಯನ್ ಅವರ ಇಬ್ಬಗೆಯ ನೀತಿಯನ್ನು ಟೀಕಿಸಿದೆ. ಬಿಜೆಪಿ ಮುಖಂಡ ಕೆ.ಸುರೇಂದ್ರನ್ ಈ ಬಗ್ಗೆ ಮಾತನಾಡಿ, ʼʼಮುಖ್ಯಮಂತ್ರಿ ಯಾಕೆ ಹಿಂದೂಗಳ ಸಂಪ್ರದಾಯದ ವಿಚಾರದಲ್ಲಿ ಪದೇ ಪದೆಮೂಗು ತೂರಿಸುತ್ತಾರೆ? ಅವರು ಇತರ ಸಮುದಾಯಗಳ ಆಚರಣೆ ಬಗ್ಗೆ ಒಮ್ಮೆಯೂ ಮಾತನಾಡುತ್ತಿಲ್ಲ. ನಮ್ಮ ಸಂಪ್ರದಾಯವನ್ನು ಕೆಟ್ಟ ಆಚರಣೆ ಎಂದು ಹೇಳುವ ಅಧಿಕಾರ ಅವರಿಗಿಲ್ಲ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಟೀಕಿಸುವ ಇಂತಹ ಪ್ರವೃತ್ತಿಯನ್ನು ಸಿಎಂ ನಿಲ್ಲಿಸಬೇಕುʼʼ ಎಂದು ಹೇಳಿದ್ದಾರೆ.
ಸಿಪಿಐ (ಎಂ) ಮುಖಂಡ ಮತ್ತು ದೇವಸ್ವಂ (ದೇವಾಲಯ ವ್ಯವಹಾರಗಳು) ಸಚಿವ ವಿ.ಎನ್. ವಾಸವನ್ ಸುದ್ದಿಗಾರರೊಂದಿಗೆ ಮಾತನಾಡಿ, ʼʼಈ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲʼʼ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pinarayi Vijayan: ಕೇರಳ ಮಿನಿ ಪಾಕಿಸ್ತಾನ; ನಿತೇಶ್ ರಾಣೆ ಹೇಳಿಕೆಯನ್ನು ಟೀಕಿಸಿದ ಸಿಎಂ ಪಿಣರಾಯಿ ವಿಜಯನ್