Tuesday, 7th January 2025

Pinarayi Vijayan: ಕೇರಳ ಮಿನಿ ಪಾಕಿಸ್ತಾನ; ನಿತೇಶ್‌ ರಾಣೆ ಹೇಳಿಕೆಯನ್ನು ಟೀಕಿಸಿದ ಸಿಎಂ ಪಿಣರಾಯಿ ವಿಜಯನ್

ತಿರುವನಂತಪುರಂ: ʼಕೇರಳ ಮಿನಿ ಪಾಕಿಸ್ತಾನ’ ಎಂದು ಕರೆದಿರುವ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ (Nitesh Rane) ಅವರ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಇಂದು (ಡಿ. 31) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗಳು ಅತ್ಯಂತ ಪ್ರಚೋದನಕಾರಿ ಹಾಗೂ ಖಂಡನೀಯ ಎಂದು ಹೇಳಿದ್ದಾರೆ.

‌”ಕೇರಳದ ಬಗ್ಗೆ ಸಂಘ ಪರಿವಾರದ ಮೂಲ ಧೋರಣೆ ಮಹಾರಾಷ್ಟ್ರ ಸಚಿವರ ಮಾತಿನ ಮೂಲಕ ಈಗ ಬಹಿರಂಗವಾಗಿದೆ. ದ್ವೇಷದ ಹೇಳಿಕೆ ನೀಡಿರುವ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ರೀತಿಯಲ್ಲೂ ಅರ್ಹರಾಗಿರುವುದಿಲ್ಲʼ’ ಎಂದಿದ್ದಾರೆ. ʼʼಇಂತಹ ಅಸಂಬದ್ಧ ಹೇಳಿಕೆ ಜಾತ್ಯತೀತತೆ ಮತ್ತು ಕೋಮು ಸೌಹಾರ್ದತೆಯ ಭದ್ರಕೋಟೆಯಾಗಿರುವ ಕೇರಳದ ವಿರುದ್ಧ ಸಂಘ ಪರಿವಾರ ನಡೆಸುತ್ತಿರುವ ದ್ವೇಷವನ್ನು ಪ್ರತಿಬಿಂಬಿಸುತ್ತದೆ. ಕೇರಳದ ಮೇಲಿನ ಈ ಹೀನ ಹೇಲಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸಂಘ ಪರಿವಾರದ ದ್ವೇಷಪೂರಿತ ಪ್ರಚಾರದ ವಿರುದ್ಧ ಎಲ್ಲ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳು ಒಂದಾಗಬೇಕು” ಎಂದು ಪಿಣರಾಯಿ ವಿಜಯನ್ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಏನಿದು ವಿವಾದ?

ಪುಣೆಯ ಪುರಂದರಲ್ಲಿ ನಡೆದ ‘ಶಿವ ಪ್ರತಾಪ್ ದಿವಸ’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಹಾರಾಷ್ಟ್ರ ಸಚಿವ ನಿತೇಶ್‌ ರಾಣೆ, ‘ʼಕೇರಳ ಒಂದು ಮಿನಿ ಪಾಕಿಸ್ತಾನ. ಅದಕ್ಕೇ ಅಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರಿಗೆ ಮತ ಹಾಕಿದವರು ಭಯೋತ್ಪಾದಕರುʼ’ ಎಂದು ಹೇಳಿದ್ದರು.

ತಮ್ಮ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ಪ್ರತಿಕ್ರಿಯಿಸಿದ್ದ ಅವರು, ‘ʼಕೇರಳ ಕೂಡ ನಮ್ಮ ದೇಶದ ಭಾಗವೇ ಹೌದು. ಅಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದಕ್ಕೆ ನಾವೆಲ್ಲರೂ ಆತಂಕಪಡಬೇಕು. ಅಲ್ಲಿನ ಹಿಂದೂಗಳನ್ನು ಕ್ರೈಸ್ತ ಮತ್ತು ಮುಸ್ಲಿಂ ಧರ್ಮಗಳಿಗೆ ಪ್ರತಿದಿನವೂ ಮತಾಂತರ ಮಾಡಲಾಗುತ್ತಿದೆ. ಲವ್ ಜಿಹಾದ್ ಪ್ರಕರಣಗಳೂ ಹೆಚ್ಚಾಗುತ್ತಿವೆ. ಪಾಕಿಸ್ತಾನದಲ್ಲಿ ಹಿಂದೂಗಳ ವಿಷಯದಲ್ಲಿ ಹೇಗೆ ವರ್ತಿಸುತ್ತಿದ್ದಾರೆಯೋ ಅದೇ ಪರಿಸ್ಥಿತಿ ಮುಂದೆ ಕೇರಳದಲ್ಲಿ ಉದ್ಭವಿಸಲಿದೆ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆʼ’ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ನಿತೇಶ್ ರಾಣೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ʼʼಸಚಿವರ ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಬೇಕುʼʼ ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನ್ಯೂಇಯರ್‌ ಪಾರ್ಟಿಗೆ ಮದ್ಯ ಕದಿಯೋಕೆ ಬಾರ್‌ಗೆ ನುಗ್ಗಿದ ಐನಾತಿ ಕಳ್ಳ; ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ!