Sunday, 5th January 2025

Plane Crash: ಅಮೆರಿಕದಲ್ಲಿ ಭೀಕರ ಅಪಘಾತ; ಕಟ್ಟಡಕ್ಕೆ ಬಡಿದು ವಿಮಾನ ಪತನ: 2 ಸಾವು , 18 ಜನರಿಗೆ ಗಂಭೀರ ಗಾಯ

Plane Crash

ಲಾಸ್ ಏಂಜಲೀಸ್‌‌: ಹೊಸ ವರ್ಷಕ್ಕೂ ಮುನ್ನವೇ ಎರಡೆರಡು ಭೀಕರ ವಿಮಾನ ಅಪಘಾತ (Plane Crash) ಕಂಡು ಇಡೀ ಜಗತ್ತೇ ಬೆಚ್ಚಿ ಬಿದ್ದಿತ್ತು. ಇದೀಗ ಅನೆರಿಕದ ಕ್ಯಾಲಿಫೋರ್ನಿಯಾದಲ್ಲಿ (California) ಸಣ್ಣ ವಿಮಾನವೊಂದು ಗುರುವಾರ ವಾಣಿಜ್ಯ ಕಟ್ಟಡಕ್ಕೆ ಅಪ್ಪಳಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಲಾಸ್ ಏಂಜಲೀಸ್‌ನ (Los Angeles) ಆಗ್ನೇಯಕ್ಕೆ 25 ಮೈಲಿ (40 ಕಿಲೋ ಮೀಟರ್) ದೂರದಲ್ಲಿರುವ ಫುಲ್ಲರ್ಟನ್ ಮುನ್ಸಿಪಲ್ ಏರ್‌ಪೋರ್ಟ್ ಬಳಿ ಮಧ್ಯಾಹ್ನದ ವೇಳೆಗೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಈ ಬಗ್ಗೆ ಲಾಸ್ ಏಂಜಲೀಸ್‌ನ ಪೊಲೀಸರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು, ಇಬ್ಬರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಘಟನೆಯಲ್ಲಿ 18 ಮಂದಿಗೆ ಗಾಯವಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರು ವಿಮಾನದಲ್ಲಿದ್ದ ಪ್ರಯಾಣಿಕರೇ ಇಲ್ಲವೇ ಕಟ್ಟಡದ ಒಳಗಿದ್ದ ಕಾರ್ಮಿಕರೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಪತನಗೊಂಡ ವಿಮಾನ ವಿಮಾನವು ಏಕ-ಎಂಜಿನ್ ವ್ಯಾನ್‌ನ RV-10 ಆಗಿದ್ದು, ನಾಲ್ಕು ಆಸನಗಳನ್ನು ಹೊಂದಿರುವ ಸಣ್ಣ ವಿಮಾನವಾಗಿದೆ. ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ ವೈಮಾನಿಕ ದೃಶ್ಯಾವಳಿಗಳು ಕಟ್ಟಡದಿಂದ ದಟ್ಟವಾದ ಹೊಗೆ ಏರುತ್ತಿರುವುದನ್ನು ತೋರಿಸಿದೆ, ಅಗ್ನಿಶಾಮಕ ಇಂಜಿನ್ಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ .

ವಿಮಾನ ಪತನಕ್ಕೆ ಇನ್ನೂ ನಿಖರಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆಯನ್ನು ಪ್ರಾರಂಭಿಸಿದೆ.

ದಕ್ಷಿಣ ಕೊರಿಯಾದ (South Korea) ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಭಾನುವಾರ (ಡಿ. 29) ಬೆಳಗ್ಗೆ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ 179 ಜನರು ಮೃತಪಟ್ಟಿದ್ದರು. ವಿಮಾನವು ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿದ್ದ ವೇಳೆ ಲ್ಯಾಂಡಿಂಗ್‌ ವೇಳೆ ಬೆಂಕಿ ಹತ್ತಿಕೊಂಡು ಪತನಗೊಂಡಿದೆ ಎಂದು ಹೇಳಲಾಗಿದೆ.

ಡಿ. 25ರಂದು ಅಜೆರ್ಬೈಜಾನ್ ಏರ್‌ಲೈನ್ಸ್‌ಗೆ ಸೇರಿದ ಪ್ರಯಾಣಿಕ ವಿಮಾನವೊಂದು ಕಝಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ 38 ಜನ ಅಸುನೀಗಿದ್ದರು. ಅಕ್ಟೌ ವಿಮಾನ ನಿಲ್ದಾಣದ ಬಳಿ ಬರುತ್ತಿದ್ದಂತೇ ಪೈಲಟ್ ನಿಯಂತ್ರಣ ಕಳೆದುಕೊಂಡ J2-8243 ವಿಮಾನವು, ಕ್ಷಣಾರ್ಧದಲ್ಲಿ ನೆಲಕ್ಕುರುಳಿ ಬೆಂಕಿಗೆ ಆಹುತಿಯಾಗಿತ್ತು.

ಈ ಸುದ್ದಿಯನ್ನೂ ಓದಿ : Plane Crash : ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ದುರಂತ; ಬದುಕುಳಿದವರು ಕೇವಲ ಇಬ್ಬರೇ- ಸಾವಿನ ಸಂಖ್ಯೆ 179ಕ್ಕೆ ಏರಿಕೆ