ಹೊಸದಿಲ್ಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PM Fasal Bima Yojana) ಮತ್ತು ಪುನರ್ರಚನೆ ಮಾಡಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (Restructured Weather-Based Crop Insurance Scheme)ಯನ್ನು 2025-26ರವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ (ಜ. 1) ಅನುಮೋದನೆ ನೀಡಿದೆ. ಯೋಜನೆಗೆ ಒಟ್ಟಾರೆ 69,515.71 ಕೋಟಿ ರೂ. ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಸುದ್ದಿಗಾರರಿಗೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಎಪಿ ರಸಗೊಬ್ಬರಗಳಿಗೆ 3,850 ಕೋಟಿ ರೂ.ಗಳ ಹೆಚ್ಚುವರಿ ಸಬ್ಸಿಡಿ ಒದಗಿಸಲೂ ಸಂಪುಟ ಅನುಮೋದನೆ ನೀಡಿದೆ.
Ours is a Government fully committed to furthering welfare of farmers. We are proud of all our farmer sisters and brothers who work hard to feed our nation. The first Cabinet of 2025 is dedicated to enhancing prosperity for our farmers. I am glad that key decisions have been…
— Narendra Modi (@narendramodi) January 1, 2025
ಈ ಬಗ್ಗೆ ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್, “ಈ ನಿರ್ಧಾರವು 2025-26ರವರೆಗೆ ದೇಶಾದ್ಯಂತದ ರೈತರಿಗೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆಗಳ ನಾಶದಿಂದ ಪಾರಾಗಲು ಸಹಾಯ ಮಾಡುತ್ತದೆ. ಇದಲ್ಲದೆ ಪಾರದರ್ಶಕತೆ ಮತ್ತು ಕ್ಲೈಮ್ ಲೆಕ್ಕಾಚಾರ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾದ ದೊಡ್ಡ ಪ್ರಮಾಣದ ತಂತ್ರಜ್ಞಾನಕ್ಕಾಗಿ ಕೇಂದ್ರ ಸಚಿವ ಸಂಪುಟವು 824.77 ಕೋಟಿ ರೂ.ಗಳ ನಿಧಿ (FIAT) ರಚಿಸಲು ಅನುಮೋದನೆ ನೀಡಿದೆ” ಎಂದು ಹೇಳಿದರು. ತಂತ್ರಜ್ಞಾನವನ್ನು ಬಳಸಿಕೊಂಡು ಇಳುವರಿ ಅಂದಾಜು ವ್ಯವಸ್ಥೆ (YES-TECH), ಹವಾಮಾನ ಮಾಹಿತಿ ಮತ್ತು ನೆಟ್‌ವರ್ಕ್ ಡೇಟಾ ವ್ಯವಸ್ಥೆ (WINDS) ಮುಂತಾದ ಯೋಜನೆಗಳ ಅಡಿಯಲ್ಲಿ ತಾಂತ್ರಿಕ ಉಪಕ್ರಮಗಳಿಗೆ ಧನಸಹಾಯ ನೀಡಲು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಅಧ್ಯಯನಗಳಿಗೆ ಈ ನಿಧಿಯನ್ನು ಬಳಸಲಾಗುತ್ತದೆ.
ಇಳುವರಿ ಅಂದಾಜಿಗಾಗಿ ಯಸ್-ಟೆಕ್ (YES-TECH)ನಲ್ಲಿ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. 9 ಪ್ರಮುಖ ರಾಜ್ಯಗಳಾದ ಆಂಧ್ರ ಪ್ರದೇಶ, ಅಸ್ಸಾಂ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಕರ್ನಾಟಕ ಪ್ರಸ್ತುತ ಇದನ್ನು ಜಾರಿಗೊಳಿಸಿವೆ. ಉಳಿದ ರಾಜ್ಯಗಳಲ್ಲೂ ಇದನ್ನು ಶೀಘ್ರದಲ್ಲೇ ಜಾರಿಗೊಳಿಸಲಿವೆ.
ಬ್ಲಾಕ್ ಮಟ್ಟದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು (AWS) ಮತ್ತು ಪಂಚಾಯತ್ ಮಟ್ಟದಲ್ಲಿ ಸ್ವಯಂಚಾಲಿತ ಮಳೆ ಮಾಪಕಗಳನ್ನು (ARG) ಸ್ಥಾಪಿಸಲು ವಿಂಡ್ಸ್ ಉದ್ದೇಶಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೇರಳ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಪುದುಚೇರಿ, ಅಸ್ಸಾಂ, ಒಡಿಶಾ, ಕರ್ನಾಟಕ, ಉತ್ತರಾಖಂಡ ಮತ್ತು ರಾಜಸ್ಥಾನಗಳು ವಿಂಡ್ಸ್ ಅನ್ನು ಜಾರಿಗೆ ತರಲು ಮುಂದಾಗಿವೆ. ಇತರ ರಾಜ್ಯಗಳು ಬಳಸಲು ಆಸಕ್ತಿ ತೋರಿವೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸರ್ಕಾರಿ ಪ್ರಾಯೋಜಿತ ಬೆಳೆ ವಿಮಾ ಯೋಜನೆಯಾಗಿದ್ದು, ಅನಿರೀಕ್ಷಿತ ಘಟನೆಗಳಿಂದ ಬೆಳೆ ನಷ್ಟ ಅಥವಾ ಹಾನಿಯನ್ನು ಎದುರಿಸುತ್ತಿರುವ ರೈತರಿಗೆ ಹಣಕಾಸಿನ ನೆರವು ನೀಡುವ ಮೂಲಕ ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ರೈತರ ಆದಾಯವನ್ನು ಸ್ಥಿರಗೊಳಿಸುತ್ತದೆ, ನವೀನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ, ಆಹಾರ ಭದ್ರತೆ ಒದಗಿಸುತ್ತದೆ. ಇದನ್ನು 2016ರಲ್ಲಿ ಪರಿಚಯಿಸಲಾಯಿತು.
ಈ ಸುದ್ದಿಯನ್ನೂ ಓದಿ: Manmohan Singh: ಮನಮೋಹನ್ ಸಿಂಗ್‌ಗೆ ರಾಷ್ಟ್ರಪತಿ ಮುರ್ಮು ಗೌರವ ನಮನ; ಸಚಿವ ಸಂಪುಟದಿಂದ ಸಂತಾಪ!