Wednesday, 11th December 2024

PM Modi: ಪ್ರಧಾನಿ ಮೋದಿ ನೂತನ ಎಸ್‌ಸಿಎ ಉದ್ಘಾಟಿಸುವ ಸಾಧ್ಯತೆ

PM Modi

ಬೆಂಗಳೂರು: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ(BCCI) 93ನೇ ವಾರ್ಷಿಕ ಸಭೆ ಸೆಪ್ಟೆಂಬರ್‌ 29ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದೇ ವೇಳೆ ಬೆಂಗಳೂರು ಹೊರವಲಯದಲ್ಲಿ ನಿರ್ಮಾಣಗೊಂಡಿರುವ ನೂತನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)(New NCA)ಉದ್ಘಾಟನೆಯೂ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಮಾಹಿತಿ ನೀಡದಿದ್ದರೂ ಕೂಡ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದೆ.

ಇತ್ತೀಚಿಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದ ಮಾತನಾಡಿದ್ದ ಜಯ್‌ ಶಾ, ಇಷ್ಟು ದಿನ ಬರೀ ಕ್ರಿಕೆಟ್ ಆಟಗಾರರಿಗೆ ಮಾತ್ರ ಲಭ್ಯವಾಗಿದ್ದ ಎನ್‌ಸಿಎನಲ್ಲಿ ಇನ್ನು ಬೇರೆ ಕ್ರೀಡಾಪಟುಗಳು ಸಹ ಅಭ್ಯಾಸ ಮಾಡಬಹುದು ಎಂದು ತಿಳಿಸಿದ್ದರು. ನೂತನ ಕಟ್ಟಡದಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳು ಇರುವುದಾಗಿಯೂ ಅವರು ಮಾಹಿತಿ ನೀಡಿದ್ದರು. ಜಯ್‌ ಶಾ ನಿರ್ಗಮನದಿಂದ ತೆರವಾಗಿರುವ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಮಹಾಸಭೆಯ ವೇಳೆ ಚುನಾವಣೆ ನಡೆಸುವ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ US Open: ಸಬಲೆಂಕಾ-ಪೆಗುಲಾ ಫೈನಲ್‌ ಫೈಟ್‌

ನೂತನವಾಗಿ ನಿರ್ಮಿಸಲಾಗಿರುವ ಎನ್‌ಸಿಎ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಇದರೊಳಗೆ ಮೂರು ಅಂತಾರಾಷ್ಟ್ರೀಯ ಮಟ್ಟದ ಮೈದಾನಗಳಿದ್ದು, 45 ಅಭ್ಯಾಸ ಪಿಚ್‌ಗಳನ್ನು ನಿರ್ಮಿಸಲಾಗಿದೆ. ಒಲಿಂಪಿಕ್‌ ಗಾತ್ರದ ದೊಡ್ಡ ಈಜುಕೊಳದ ವ್ಯವಸ್ಥೆಯನ್ನು ಕೂಡ ಇದು ಹೊಂದಿದೆ. 2008ರಲ್ಲಿ ಈ ನೂತನ ಎನ್‌ಸಿಎ ಭೂಮಿಯನ್ನು ಖರೀದಿಸಲಾಗಿತ್ತು. ಸದ್ಯ ಇರುವ ಎನ್‌ ಸಿಎ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ತಾಗಿಕೊಂಡಿದೆ. ಇದೀಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರ ಇರುವಂತೆ ಹೊಸ ಎನ್‌ ಸಿಎ ನಿರ್ಮಿಸಲಾಗಿದೆ. ಇದು ವಿಶಾಲವಾಗಿದ್ದು, ಎಲ್ಲಾ ಸೌಕರ್ಯಗಳು ಇರಲಿದೆ.

ಸದ್ಯ ವಿವಿಎಸ್ ಲಕ್ಷ್ಮಣ್ ಅವರು ಎನ್‌ ಸಿಎ ಅಧ್ಯಕ್ಷರಾಗಿದ್ದಾರೆ. ಅವರ ಅಧಿಕಾರವಧಿ ಶೀಘ್ರದಲ್ಲಿ ಅಂತ್ಯವಾಗಲಿದೆ. ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು ಮುಂದಿನ ಎನ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಹಲವಾರು ಕ್ರಿಕೆಟಿಗರನ್ನು ಬೆಳೆಸುವಲ್ಲಿ ಎನ್‌ಸಿಎ ಪ್ರಮುಖ ಪಾತ್ರ ವಹಿಸಿದೆ. ಗಾಯಗಳಿಂದ ಚೇತರಿಸಿಕೊಳ್ಳುವ ರಾಷ್ಟ್ರೀಯ ಆಟಗಾರರಿಗೆ ಇದು ಪ್ರಮುಖ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಪುನರ್ವಸತಿ ಮತ್ತು ಅವರ ಫಾರ್ಮ್ ಅನ್ನು ಮರಳಿ ಪಡೆಯಲು ಅಭ್ಯಾಸ ಆಟಗಳಲ್ಲಿ ತೊಡಗಿಸಿಕೊಳ್ಳಲು ಆಟಗಾರರಿಗೆ ಎನ್‌ ಸಿಎ ಅವಕಾಶವನ್ನು ನೀಡುತ್ತದೆ.