Thursday, 28th November 2024

PM Narendra Modi: ಪ್ರಧಾನಿ ಮೋದಿ ಹತ್ಯೆಗೆ ಭಾರೀ ಸಂಚು? ಬೆದರಿಕೆ ಕರೆ ಮಾಡಿದ್ದ ಮಹಿಳೆ ಹೇಳಿದ್ದೇನು?

Narendra Modi

ನವದೆಹಲಿ: ಕೆಲವು ತಿಂಗಳಿಂದ ಬಾಂಬ್‌ ಬೆದರಿಕೆ, ಜೀವ ಬೆದರಿಕೆ ಕರೆಗಳು ಆಗಾಗ ಬರುತ್ತಿರುತ್ತವೆ. ಇದೀಗ ಪ್ರಧಾನಿ ನರೇಂದ್ರ ಮೋದಿ(PM Narendra Modi) ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಮುಂಬೈ ಟ್ರಾಫಿಕ್​ ಕಂಟ್ರೋಲ್​ ರೂಂಗೆ(Mumbai Control Room) ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿದ್ದಾಳೆ. ಮೋದಿ ಹತ್ಯೆಗೆ ಸಕಲ ಸಿದ್ದತೆ ನಡೆದಿದೆ ಎಂದು ಕರೆ ಮಾಡಿದ ಮಹಿಳೆ ತಿಳಿಸಿದ್ದು, ಆತಂಕ ಸೃಷ್ಟಿಸಿದೆ.

ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಕಾರ್ಯವಿಧಾನಗಳನ್ನು ಅನುಸರಿಸಿ ತನಿಖೆಯನ್ನು ಮುಂದುವರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಹಾಕಿದ್ದು 10 ದಿನಗಳೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಬಾಬಾ ಸಿದ್ಧಿಕಿ ಕೊಲೆ ಮಾಡಿದ ರೀತಿಯಲ್ಲಿ ನಿಮ್ಮನ್ನೂ ಕೊಲೆ (Death Threat) ಮಾಡುತ್ತೇವೆ ಎಂದು ಬೆದರಿಕೆ ಸಂದೇಶ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವತಿಯನ್ನು ಬಂಧಿಸಲಾಗಿತ್ತು.

ಬಂಧಿತ ಮಹಿಳೆಯನ್ನು ಫಾತಿಮಾ ಖಾನ್‌ ಎಂದು ಗುರುತಿಸಲಾಗಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ(Information Technology) ಬಿಎಸ್ಸಿ ಮಾಡಿರುವ ಫಾತಿಮಾ ಖಾನ್ ತನ್ನ ಕುಟುಂಬ ಸದಸ್ಯರೊಂದಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರ ಪ್ರದೇಶದ ನಿವಾಸಿ. ತನಿಖೆಯಲ್ಲಿ ಆಕೆ ಮಾನಸಿಕ ರೋಗದಿಂದ ಬಳಲುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಆರೋಪಿ ಫಾತಿಮಾ ಮುಂಬೈ ನಗರ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಬೆದರಿಕೆ ಸಂದೇಶ ಕಳುಹಿಸಿದ್ದಳು. ಸಂದೇಶದಲ್ಲಿ “ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಹಾಕಿದ್ದು 10 ದಿನಗಳೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಬಾಬಾ ಸಿದ್ಧಿಕಿ ಕೊಲೆ ಮಾಡಿದ ರೀತಿಯಲ್ಲಿ ನಿಮ್ಮನ್ನೂ ಕೊಲೆ ಮಾಡುತ್ತೇವೆ ಎಂದು ಕಳುಹಿಸಿದ್ದಳು.

ಕೆಲವು ದಿನಗಳ ಹಿಂದೆಯಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಕಸ್ಟಮರ್ ಕೇರ್ ನಂಬರ್‌ಗೆ ಬಾಂಬ್ ಬೆದರಿಕೆ ಬಂದಿತ್ತು. ಕರೆ ಮಾಡಿದ ದುಷ್ಕರ್ಮಿ “ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಸಿಇಒ” ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್‌ಬಿಐ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿದ್ದು, ಸೆಂಟ್ರಲ್ ಬ್ಯಾಂಕ್ ಅನ್ನು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಉಗ್ರ ಸಂಘಟನೆ “ಸಿಇಒ” ಎಂದು ಹೇಳಿಕೊಂಡಿದ್ದಾನೆ ಮತ್ತು ಬೆದರಿಕೆ ಹಾಕುವ ಮುನ್ನ ಫೋನ್‌ನಲ್ಲಿ ಹಾಡನ್ನು ಕೂಡ ಹಾಡಿದ್ದ.

ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕರೆ ಮಾಡಿದವರ ಪತ್ತೆಗೆ ಯತ್ನಿಸುತ್ತಿದ್ದಾರೆ. ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಗುಂಪು 2008ರಲ್ಲಿ ಮುಂಬೈ ದಾಳಿಯನ್ನು ನಡೆಸಿತ್ತು. ಇದು ಭಾರತದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ.

ಈ ಸುದ್ದಿಯನ್ನೂ ಓದಿ: Bomb Threats: ಒಂದೇ ದಿನ 70ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ