ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತಿಚೆಗೆ ತಮ್ಮ ಎರಡು ದಿನಗಳ ಕುವೈತ್ (Kuwait) ಭೇಟಿಯ ಸಂದರ್ಭದಲ್ಲಿ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಸುವ ನಿಟ್ಟಿನಲ್ಲಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಇನ್ನೊಂದು ಘಟನೆಯ ವಿಡಿಯೊ ಇದೀಗ ಸೋಶಿಯಲ್ ಮಿಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿದೆ (Viral Video). ಪ್ರಧಾನಿ ಮೋದಿ ಅವರು ಅಲ್ಲಿನ ಭಾರತೀಯ ವ್ಯಕ್ತಿಯೊಬ್ಬರೊಂದಿಗೆ ಅವರ ಮಕ್ಕಳ ಶಿಕ್ಷಣದ ಬಗ್ಗೆ ಮರಾಠಿಯಲ್ಲಿ ಮಾತನಾಡುತ್ತಿರುವ ವಿಡಿಯೊ ಇದಾಗಿದೆ.
ಡಿ. 21ರಂದು ಪ್ರಧಾನಿ ಮೋದಿ ಅವರು ಕುವೈತ್‌ನಲ್ಲಿರುವ ಕಾರ್ಮಿಕ ಶಿಬಿರವೊಂದಕ್ಕೆ (labour camp) ಭೇಟಿ ನೀಡಿದ್ದರು. ಇದು ತಮ್ಮ ಎರಡು ದಿನಗಳ ಕುವೈತ್ ಭೇಟಿಯ ಸಂದರ್ಭದಲ್ಲಿ ಸಾಗರದಾಚೆಯ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಭಾರತಿಯ ಕಾರ್ಮಿಕರ ಉಭಯಕುಶಲೊಪರಿ ವಿಚಾರಿಸುವುದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೊಜಿಸಿದ್ದ ವಿಶೇಷ ಭೇಟಿ ಕಾರ್ಯಕ್ರಮವಾಗಿತ್ತು.
ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಗಲ್ಫ್ ಸ್ಪೈಕ್ ಲೇಬರ್ ಕ್ಯಾಂಪ್‌ನಲ್ಲಿ ಹೃದಯಸ್ಪರ್ಶಿ ಸ್ವಾಗತ ಲಭಿಸಿತ್ತು. ಪ್ರಧಾನಿ ಮೋದಿ ಅವರು ತಮ್ಮ ಎಂದಿನ ಶೈಲಿಯಲ್ಲಿ ಅಲ್ಲಿನ ಭಾರತೀಯ ಮೂಲದ ಕಾರ್ಮಿಕರೊಂದಿಗೆ ಆತ್ಮೀಯವಾಗಿ ಬೆರೆತು ಕೆಲವರೊಂದಿಗೆ ಮಾತುಕತೆಯನ್ನೂ ಸಹ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿನ ಕಾರ್ಮಿಕರೊಂದಿಗೆ ಆತ್ಮಿಯವಾಗಿ ಬೆರೆತ ಮೋದಿ ಅವರೊಂದಿಗೆ ಸ್ನ್ಯಾಕ್ಸ್ ಸಹ ಸವಿದರು.
ಈ ಸಂದರ್ಭದಲ್ಲಿ ಅಲ್ಲಿನ ಉದ್ಯೋಗಿಗಳೊಂದಿಗೆ ಸಂವಾದ ನಡೆಸಿದ ಮೋದಿ ಅವರು ಈ ಸಂದರ್ಭದಲ್ಲಿ, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕಾರ್ಮಿಕರೊಬ್ಬರೊಂದಿಗೆ ಪ್ರಧಾನಿ ಮೋದಿ ಅವರು ಮರಾಠಿಯಲ್ಲೆ ನಿರರ್ಗಳವಾಗಿ ಮಾತನಾಡಿ ಗಮನ ಸೆಳೆದರು.
ಮೊದಲಿಗೆ ಮೋದಿ ಅವರು ಆ ಕಾರ್ಮಿಕರಲ್ಲಿ ‘ಕಿತಿ ವರ್ಷ ಝಲಿ?’ (ಎಷ್ಟು ವರ್ಷಗಳಿಂದ ನೀವಿಲ್ಲಿದ್ದೀರಿ?) ಎಂದು ಕೇಳಿದ್ದಾರೆ. ಅದಕ್ಕೆ ಅವರು ‘9 ವರ್ಷ ಝಲಿ’ (9 ವರ್ಷಗಳಿಂದ) ಎಂದು ಹೇಳಿದ್ದಾರೆ. ಈ ಸಂಭಾಷಣೆ ಮುಂದುವರಿದಿದ್ದು, ‘ನಿಮ್ಮ ಮುಂದಿನ ಪ್ಲ್ಯಾನ್ ಏನು?’, ಮಕ್ಕಳು ಏನು ಮಾಡುತ್ತಿದ್ದಾರೆ ಎಂದೆಲ್ಲಾ ಮರಾಠಿಯಲ್ಲೇ ಕೇಳಿದ್ದಾರೆ. ಇದಕ್ಕೆ ಆ ವ್ಯಕ್ತಿ ಮರಾಠಿಯಲ್ಲೇ ಉತ್ತರಿಸಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರು ನಡೆಸಿರುವ ಈ ಮರಾಠಿ ಸಂಭಾಷಣೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನು ಓದಿ: Lok Sabha Polls: ಮತದಾರರು ಹೆಚ್ಚಿದ್ದರೂ ಮತದಾನ ಕಡಿಮೆ! ಚುನಾವಣಾ ಆಯೋಗದಿಂದ ಮಾಹಿತಿ
ಈ ಹಿಂದೆಯೂ ಪ್ರಧಾನಿ ಮೋದಿ ಅವರು ಯಾವುದೇ ದೇಶಕ್ಕೆ ಭೇಟಿ ನಿಡಿದರೂ ಅಲ್ಲಿರುವ ಭಾರತಿಯರೊಂದಿಗೆ ವಿಶೇಷ ಮಾತುಕತೆ, ಸಂವಾದ ನಡೆಸಿ ಗಮನ ಸೆಳೆಯುತ್ತಾರೆ. 2016ರಲ್ಲಿ ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ ಹಾಗೂ ಕತಾರ್ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಲೇಬರ್ ಕ್ಯಾಂಪ್ ಗಳಿಗೆ ಭೇಟಿ ನೀಡಿ ಅಲ್ಲಿ ಉದ್ಯೋಗಿಗಳೊಂದಿಗೆ ಮಾತುಕತೆ ನಡೆಸಿದ್ದರು. ಹಾಗೆಯೇ 2015ರಲ್ಲಿ ಅಬು ಧಾಬಿಗೆ ಭೇಟಿ ನಿಡಿದ್ದ ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರು ಅಲ್ಲಿರು ಭಾರತಿಯ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದರು.
ವಿವಿಧ ದೇಶಗಳಲ್ಲಿ ಇರುವ ಅನಿವಾಸಿ ಭಾರತೀಯ ಕಾರ್ಮಿಕರ ಕಲ್ಯಾಣಕ್ಕಾಗಿ ಮೋದಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದಕ್ಕಾಗಿ 2014ರಲ್ಲಿ ಜಾರಿಗೆ ಬಂದ ಇ-ಮೈಗ್ರೇಟ್ ನೀತಿ ಬಲ ತುಂಬುತ್ತಿದೆ.