Sunday, 24th November 2024

PM Narendra Modi: ಸಿಜೆಐ ಚಂದ್ರಚೂಡ್‌ ಮನೆಯಲ್ಲಿ ಪ್ರಧಾನಿ ಮೋದಿ: ವಿಪಕ್ಷ ಟೀಕೆ, ಹೋದರೇನು ತಪ್ಪು ಎಂದ ಬಿಜೆಪಿ

pm Narendra Modi

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ಅವರ ಮನೆಗೆ ಗಣೇಶನ ಪೂಜೆಗೆ (Ganesh puja) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭೇಟಿ ನೀಡಿರುವುದು ಈಗ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಸಿಜೆಐ ಮನೆಗೆ ಪ್ರಧಾನಿ ಮೋದಿ ಭೇಟಿ ನೀಡಿರುವುದು ಕೆಟ್ಟ ಸಂದೇಶವನ್ನು ರವಾನಿಸುತ್ತದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದರೆ, ಹೋದರೇನು ತಪ್ಪು ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.

ಶಿವಸೇನೆಯ ನಾಯಕ, ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅವರು ಮೋದಿ ಭೇಟಿಯನ್ನು ಟೀಕಿಸಿದ್ದಾರೆ. ಇಂತಹ ಭೇಟಿಗಳು ಅನುಮಾನಗಳನ್ನು ಹುಟ್ಟುಹಾಕುತ್ತವೆ. ಶಿವಸೇನೆ ಯುಬಿಟಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಡುವಿನ ಜಗಳಕ್ಕೆ ಸಂಬಂಧಿಸಿದ ಪ್ರಕರಣದಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳು ಹಿಂದೆ ಸರಿಯಬೇಕು ಎಂದಿದ್ದಾರೆ.

“ಗಣಪತಿ ಹಬ್ಬದಲ್ಲಿ ಪ್ರಧಾನಿ ಇದುವರೆಗೆ ಎಷ್ಟು ಜನರ ಮನೆಗೆ ಭೇಟಿ ನೀಡಿದ್ದಾರೆ? ನನಗೆ ಮಾಹಿತಿ ಇಲ್ಲ. ದೆಹಲಿಯಲ್ಲಿ ಹಲವೆಡೆ ಗಣೇಶ ಹಬ್ಬ ಆಚರಿಸಲಾಗುತ್ತದೆ, ಆದರೆ ಪ್ರಧಾನಿ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಹೋಗುತ್ತಾರೆ. ಪ್ರಧಾನಮಂತ್ರಿ ಮತ್ತು ಮುಖ್ಯ ನ್ಯಾಯಾಧೀಶರು ಒಟ್ಟಾಗಿ ಆರತಿ ಮಾಡುತ್ತಾರೆ. ಸಂವಿಧಾನದ ಪಾಲಕರು ಈ ರೀತಿಯಲ್ಲಿ ರಾಜಕೀಯ ನಾಯಕರನ್ನು ಭೇಟಿ ಮಾಡಿದರೆ, ಜನರು ಅನುಮಾನಿಸುತ್ತಾರೆ, “ಎಂದು ರಾವುತ್ ಟೀಕಿಸಿದ್ದಾರೆ.

ಬಿಜೆಪಿ ತಿರುಗೇಟು

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಭಾಗವಹಿಸಿದ್ದರು ಎಂದಿದ್ದಾರೆ.

ಗಣೇಶ ಪೂಜೆಗೆ ಹಾಜರಾಗುವುದು ಅಪರಾಧವಲ್ಲ. ಶುಭ ಸಮಾರಂಭಗಳು, ಮದುವೆಗಳು, ಕಾರ್ಯಕ್ರಮಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ನ್ಯಾಯಾಂಗ ಮತ್ತು ರಾಜಕಾರಣಿಗಳು ಒಂದೇ ವೇದಿಕೆ ಹಂಚಿಕೊಳ್ಳುತ್ತಾರೆ. ಪ್ರಧಾನ ಮಂತ್ರಿ ಸಿಜೆಐ ಮನೆಯಲ್ಲಿ ಭಾಗವಹಿಸಿದರೆ, ಉದ್ಧವ್ ಸೇನಾ ಸಂಸದ ಸಿಜೆಐ ಮತ್ತು ಸುಪ್ರೀಂ ಕೋರ್ಟ್‌ನ ಸಮಗ್ರತೆಯನ್ನು ಅನುಮಾನಿಸುತ್ತಾರೆ. ಕಾಂಗ್ರೆಸ್ ಈ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದೆ ಎಂದು ಪೂನವಾಲಾ ಕಿಡಿಕಾರಿದರು.

ಮೋದಿಯವರು ನಿನ್ನೆ ಗಣೇಶ ಪೂಜೆಯಲ್ಲಿ ಭಾಗವಹಿಸಲು ಮುಖ್ಯ ನ್ಯಾಯಮೂರ್ತಿಯವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದ್ದರು. ಅವರನ್ನು ಡಿವೈ ಚಂದ್ರಚೂಡ್ ಮತ್ತು ಅವರ ಪತ್ನಿ ಕಲ್ಪನಾ ದಾಸ್ ಆತ್ಮೀಯವಾಗಿ ಸ್ವಾಗತಿಸಿದರು. “ಸಿಜೆಐ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಜಿ ಅವರ ನಿವಾಸದಲ್ಲಿ ಗಣೇಶ ಪೂಜೆಯಲ್ಲಿ ಪಾಲ್ಗೊಂಡೆ. ಭಗವಾನ್ ಶ್ರೀ ಗಣೇಶ ನಮಗೆಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಅದ್ಭುತ ಆರೋಗ್ಯವನ್ನು ಆಶೀರ್ವದಿಸಲಿ” ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಪ್ರಧಾನಿ ಬರೆದಿದ್ದರು. ಪೂಜೆ ಮಾಡುತ್ತಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿ: Narendra Modi: ಸುಪ್ರೀಂ ಕೋರ್ಟ್‌ ಸಿಜೆಐ ನಿವಾಸದಲ್ಲಿ ಪ್ರಧಾನಿ ಮೋದಿ ಗಣೇಶ ಚತುರ್ಥಿ ಆಚರಣೆ-ಇಲ್ಲಿದೆ ವಿಡಿಯೋ