ನವದೆಹಲಿ: “ನಾನು ಹಿನ್ನಡೆಯ ಬಗ್ಗೆ ಅಳುತ್ತಾ ಜೀವನವನ್ನು ಕಳೆಯುವ ವ್ಯಕ್ತಿಯಲ್ಲ. ಪ್ರತಿ ಕ್ಷಣದಲ್ಲೂ ಎದುರಾಗುವ ಸವಾಲು ಎದುರಿಸಬೇಕುʼʼ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಜೆರೋಧಾ (Zerodha) ಸಂಸ್ಥೆಯ ಸಹ-ಸಂಪ್ಥಾಪಕ ನಿಖಿಲ್ ಕಾಮತ್ (Nikhil Kamath) ಅವರ ಪಾಡ್‌ಕಾಸ್ಟ್(Podcast)ನಲ್ಲಿ ಭಾಗವಹಿಸಿದ ಅವರು ಮನಬಿಚ್ಚಿ ಮಾತನಾಡಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ತಾವು ಅನಿರೀಕ್ಷಿತವಾಗಿ ಕಾಲಿಟ್ಟ ದಿನಗಳು ಮತ್ತು ಸೋಲಿನಿಂದ ತಾವು ಕಲಿತ ಪಾಠದ ಕುರಿತು ವಿವರಿಸಿದ್ದಾರೆ.
2019ರ ಜುಲೈ 22ರಂದು ಉಡಾವಣೆಯಾಗಿ ವಿಫಲವಾಗಿದ್ದ ಇಸ್ರೋದ ಚಂದ್ರಯಾನ -2 ಯೋಜನೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಅವರು ಅಂದಿನ ಚಿತ್ರಣವನ್ನು ತಿಳಿಸಿದ್ದಾರೆ. ʼʼ2019ರ ಚಂದ್ರಯಾನ -2 ವಿಫಲವಾಗಿದ್ದನ್ನೇ ಪ್ರಸ್ತಾವಿಸಿ ಹಲವರು ನಾನು ಉಡಾವಣೆ ವೇಳೆ ಹಾಜರಾಗುವುದನ್ನು ವಿರೋಧಿಸುತ್ತಾರೆʼʼ ಎಂದು ತಿಳಿಸಿದ್ದಾರೆ.
ʼʼಚಂದ್ರಯಾನ -2 ಯೋಜನೆ ಕೊನೆ ಕ್ಷಣದಲ್ಲಿ ವಿಫಲವಾಯಿತು. ಇದು ಅಲ್ಲಿದ್ದ ಪ್ರತಿಯೊಬ್ಬರಿಗೂ ಅಪಾರ ನೋವು ಉಂಟು ಮಾಡಿತ್ತು. ಈ ಬಗ್ಗೆ ನನಗೆ ಮಾಹಿತಿ ನೀಡುವ ಧೈರ್ಯ ಯಾರಿಗೂ ಇರಲಿಲ್ಲʼʼ ಮೋದಿ ಹೇಳಿದ್ದಾರೆ. ಆ ದಿನವನ್ನು ಮೆಲುಕು ಹಾಕಿಕೊಂಡ ಅವರು ಅಂದು ರಾತ್ರಿ ನಿದ್ದೆ ಮಾಡಿರಲಿಲ್ಲ. ಈ ಯೋಜನೆಗಾಗಿ ಹಗಲಿರುಳು ಕೆಲಸ ಮಾಡಿದವರನ್ನು ಭೇಟಿಯಾಗಿ ಧೈರ್ಯ ಹೇಳಲು ನಿರ್ಧರಿಸಿದ್ದಾಗಿ ವಿವರಿಸಿದ್ದಾರೆ.
ʼʼಸೋಲಿನಿಂದ ಕುಗ್ಗಿ ಅದರ ಬಗ್ಗೆಯೇ ಚಿಂತಿಸುತ್ತ ಅಳುತ್ತ ಕೂರುವ ವ್ಯಕ್ತಿ ನಾನಲ್ಲ. ಮರುದಿನ ನಾನು ಎಲ್ಲ ವಿಜ್ಞಾನಿಗಳನ್ನು ಭೇಟಿಯಾಗಿ ಯೋಜನೆ ವಿಫಲವಾಗಿದ್ದರೆ ಅದು ನನ್ನ ಜವಾಬ್ದಾರಿ ಎಂದು ಧೈರ್ಯ ತುಂಬಿದ್ದೆ. ನಿಮ್ಮಿಂದು ಇದು ಸಾಧ್ಯ ಎಂದು ಅವರಲ್ಲಿ ಆತ್ಮವಿಶ್ವಾಸ ತುಂಬಿದೆ. ಅದಾದ ಬಳಿಕ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಗೊಂಡಿತುʼʼ ಎಂದು ಅವರು ಹೇಳಿದ್ದಾರೆ.
ಚಂದ್ರಯಾನ -2 ಉಡಾವಣೆ ವೇಳೆ ಕೊನೆ ಕ್ಷಣದಲ್ಲಿ ನಿಯಂತ್ರಣ ಕಳೆದುಕೊಂಡು ಯೋಜನೆ ವಿಫಲವಾಗಿತ್ತು. ಈ ವೇಳೆ ಇಸ್ರೋದ ಬೆಂಗಳೂರು ಕಚೇರಿಯಲ್ಲಿದ್ದ ಅಧ್ಯಕ್ಷ ಕೆ.ಶಿವನ್ ಕುಗ್ಗಿ ಹೋಗಿದ್ದರು. ಅಲ್ಲೇ ಇದ್ದ ಮೋದಿ ಅವರು ಶಿವನ್ ಅವರನ್ನು ತಬ್ಬಿಕೊಂಡು ಸಂತೈಸಿ ಧೈರ್ಯ ತುಂಬಿದ್ದರು. ತಪ್ಪಿನಿಂದ ಪಾಠ ಕಲಿತ ಇಸ್ರೋ 2023ರ ಆಗಸ್ಟ್ 23ರಂದು ಚಂದ್ರಯಾನ-3 ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಚಂದ್ರಯಾನ -2 ಯೋಜನೆಯ ಸೋಲು ಮತ್ತು ಅದರಿಂದ ಹೊರಬಂದ ರೀತಿಯಿಂದ ತಾವು ರಾಜಕೀಯವಾಗಿಯೂ ಸಾಕಷ್ಟು ಪಾಠ ಕಲಿತಿದ್ದಾಗಿ ಪಾಡ್‌ಕಾಸ್ಟ್‌ನಲ್ಲಿ ಮೋದಿ ವಿವರಿಸಿದ್ದಾರೆ.
ʼʼರಾಜಕೀಯದಲ್ಲಿ ಸವಾಲು ಎದುರಿಸಲು ಸಾಕಷ್ಟು ತಯಾರಿ ಅಗತ್ಯ. ಪ್ರತಿ ಕ್ಷಣವೂ ಸವಾಲಿಗೆ ಎದೆಯೊಡ್ಡಲು ಸಿದ್ಧರಿರಬೇಕುʼʼ ಎಂದು ಮೋದಿ ತಿಳಿಸಿದ್ದಾರೆ. ತಮ್ಮ ಮೊದಲ ಮತ್ತು ಎರಡನೇ ಅವಧಿಯ ಪ್ರಧಾನಮಂತ್ರಿ ಪದವಿಯ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, ಮೋದಿ ಅವರು, ‘ʼಮೊದಲನೇ ಅವಧಿಯಲ್ಲಿ, ಜನರು ನನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಮತ್ತು ನಾನೂ ಸಹ ದೆಹಲಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆʼʼ ಎಂದು ಹೇಳಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಪಾಡ್‌ಕಾಸ್ಟ್‌ನಲ್ಲಿ ಮೋದಿ ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ಹಾದಿ, ಸವಾಲುಗಳನ್ನು ತಾವು ಎದುರಿಸಿದ ರೀತಿಯನ್ನು ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: PM Narendra Modi: ಬೆಂಗಳೂರು ಕಟ್ಟಡ ದುರಂತ; ಪ್ರಧಾನಿ ಮೋದಿ ಪರಿಹಾರ ಘೋಷಣೆ