Friday, 20th December 2024

PMAY 2.O: 2029ರ ತನಕ ಹೊಸ ಮನೆಗೆ ಪಡೆಯಿರಿ 2.50 ಲಕ್ಷ ರೂ. ಸಬ್ಸಿಡಿ!

PMAY 2.O

ಹೊಸದಿಲ್ಲಿ: ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (Pradhan Mantri Awas Yojana)ಯ ಎರಡನೇ ಹಂತವನ್ನು ಬಿಡುಗಡೆಗೊಳಿಸಿದೆ (PMAY 2.O). 2029ರ ತನಕ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ನಗರ ಪ್ರದೇಶಗಳಲ್ಲಿ ಹೊಸ ಮನೆಯನ್ನು ಕಟ್ಟುವವರು, ಫ್ಲ್ಯಾಟ್‌ ಅನ್ನು ಖರೀದಿಸುವವರು 2 ಲಕ್ಷದ 50 ಸಾವಿರ ರೂಪಾಯಿ ತನಕ ಸಬ್ಸಿಡಿ ರೂಪದಲ್ಲಿ ಹಣಕಾಸು ನೆರವನ್ನು ಪಡೆಯಬಹುದು. ನೆನಪಿರಲಿ, ಮಧ್ಯಮ ವರ್ಗದ ಜನರೂ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಹಾಗಾದರೆ ಇದು ಯಾರಿಗೆ ಸಿಗುತ್ತದೆ? ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲ ವಿವರಗಳನ್ನೂ ನೋಡೋಣ (Money Tips).

ಬಡ ಮತ್ತು ಮಧ್ಯಮ ವರ್ಗದ ಸುಮಾರು 1 ಕೋಟಿ ಜನರಿಗೆ ಸ್ವಂತ ಮನೆಯನ್ನು ಕಟ್ಟುವ ಅಥವಾ ಖರೀದಿಸುವ ಸಂದರ್ಭ 2 ಲಕ್ಷದ 30 ಸಾವಿರ ರೂ. ತನಕದ ಸಬ್ಸಿಡಿಯನ್ನು ನೀಡಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್‌ ಯೋಜನೆ- ಅರ್ಬನ್‌ 2.0 ಅನ್ನು ಬಿಡುಗಡೆಗೊಳಿಸಿದೆ. 2024ರ ಸೆಪ್ಟೆಂಬರ್‌ 1ರಿಂದ 5 ವರ್ಷಗಳ ಕಾಲ, ಅಂದರೆ 2029ರ ತನಕ ಈ ಯೋಜನೆಯನ್ನು ಇದೀಗ ವಿಸ್ತರಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಹೊಸ ಮನೆಗಳಿಗೆ ಈ ನೆರವು ಸಿಗಲಿದೆ.

ಈ PMAY-Urban 2.O ಯೋಜನೆಯಿಂದ ನಗರ ಪ್ರದೇಶದಲ್ಲಿರುವ ಮಧ್ಯಮ ವರ್ಗ ಮತ್ತು ಬಡ ಜನತೆಗೆ ಸ್ವಂತ ಮನೆಯನ್ನು ಹೊಂದಲು ಅನುಕೂಲವಾಗಲಿದೆ. ಈ ಹಿಂದೆ ಗ್ರಾಮೀಣ ಪ್ರದೇಶದ ಜನರಿಗೂ ಈ ಅನುಕೂಲವನ್ನು ನೀಡಲಾಗಿತ್ತು.

ಈ ಯೋಜನೆಯನ್ನು ಭಾರತದಾದ್ಯಂತ ನಾನಾ ಪ್ರೋಗ್ರಾಮ್‌ಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಅವುಗಳೆಂದರೆ- ಬೆನಿಫೀಶಿಯರಿ ಲೆಡ್‌ ಕನ್‌ಸ್ಟ್ರಕ್ಷನ್-BLC, ಅಫರ್ಡಬಲ್‌ ಹೌಸಿಂಗ್‌ ಇನ್‌ ಪಾರ್ಟ್‌ನರ್‌ಶಿಪ್‌ ( AHP), ಅಫರ್ಡಬಲ್‌ ರೆಂಟಲ್‌ ಹೌಸಿಂಗ್‌ (ARH), ಮತ್ತು ಇಂಟರೆಸ್ಟ್‌ ಸಬ್ಸಿಡಿ ಸ್ಕೀಮ್‌ (ISS) ಆಗಿವೆ. ಒಂದು ಕೋಟಿ ಮನೆಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.

ಹಾಗಾದರೆ ಯಾರು ಈ ಯೋಜನೆಗೆ ಅರ್ಹತೆ ಪಡೆಯುತ್ತಾರೆ? ಹಾಗೂ ಇದರಲ್ಲಿರುವ ನಾಲ್ಕು ಉಪ ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ. ದೇಶದ ಯಾವುದೇ ಭಾಗದಲ್ಲಿ ಪಕ್ಕಾ ಮನೆಯನ್ನು ಹೊಂದಿರದವರು ಈ ಸಬ್ಸಿಡಿ ಪಡೆಯಬಹುದು. ಸಬ್ಸಿಡಿ ಸೌಲಭ್ಯವನ್ನು ಪಡೆದಿರಬಾರದು.

  • ಮೊದಲನೆಯದಾಗಿ ಬೆನಿಫೀಶಿಯರಿ-ಲೆಡ್‌ ಕನ್‌ಸ್ಟ್ರಕ್ಷನ್‌ (BLC) ಪ್ರೋಗ್ರಾಮ್‌ ಬಗ್ಗೆ ನೋಡೋಣ. ಇದರಲ್ಲಿ ವಾರ್ಷಿಕ 3 ಲಕ್ಷ ರೂ. ತನಕ ಆದಾಯ ಇರುವವರು 2.5 ಲಕ್ಷ ರೂ. ತನಕ ಸಬ್ಸಿಡಿ ಪಡೆಯಬಹುದು.
  • ಅಫರ್ಡಬಲ್‌ ಹೌಸಿಂಗ್‌ ಇನ್‌ ಪಾರ್ಟ್‌ನರ್‌ಶಿಪ್‌ (AHP) ಪ್ರೋಗ್ರಾಮ್‌ ಬಗ್ಗೆ ತಿಳಿಯೋಣ. ಇದರಲ್ಲಿ ವಾರ್ಷಿಕ 3ರಿಂದ 6 ಲಕ್ಷ ರೂ. ಆದಾಯ ಇರುವವರು ಸಬ್ಸಿಡಿ ಸೌಲಭ್ಯ ಪಡೆಯಬಹುದು. 2.5 ಲಕ್ಷ ರೂ. ತನಕ ಸಬ್ಸಿಡಿ ಸಿಗುತ್ತದೆ.
  • ಅಫರ್ಡಬಲ್‌ ರೆಂಟಲ್‌ ಹೌಸಿಂಗ್‌ (ARH) ಪ್ರೋಗ್ರಾಮ್‌ ಬಗ್ಗೆ ನೋಡೋಣ. ವಾರ್ಷಿಕ 3ರಿಂದ 6 ಲಕ್ಷ ರೂ. ಆದಾಯ ಇರುವವರು ಇದರಲ್ಲಿ ಸಬ್ಸಿಡಿ ಪಡೆಯಬಹುದು. ಈ ಯೋಜನೆಯಲ್ಲಿ ಮನೆ ಕಟ್ಟಲು ಅಥವಾ ಖರೀದಿಗೆ ಸಬ್ಸಿಡಿ ಇರುವುದಿಲ್ಲ. ಆದರೆ ಅಲ್ಪಾವಧಿಗೆ ಅಫರ್ಡಬಲ್‌ ಹೌಸಿಂಗ್‌ ಪಡೆಯಲು ಸಬ್ಸಿಡಿ ನೆರವು ಸಿಗುತ್ತದೆ. ಇಲ್ಲಿ ಸರ್ಕಾರವೇ ಖಾಸಗಿ ಸಹಭಾಗಿತ್ವದಲ್ಲಿ ಕಟ್ಟಿರುವ ಮನೆಗಳಲ್ಲಿ ನಗರಗಳಿಗೆ ವಲಸೆ ಬರುವವರು, ಮನೆ ರಹಿತ ನಿರಾಶ್ರಿತರು, ಕೈಗಾರಿಕೆಗಳಲ್ಲಿ ದುಡಿಯುವವರು, ರಸ್ತೆ ಬದಿಯ ವ್ಯಾಪಾರಿಗಳು ಇತರ ಬಡವರು ಬಾಡಿಗೆಗೆ ಪಡೆದು ವಾಸಿಸಬಹುದು. ಈಗಾಗಲೇ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ್ದರೂ, ಖಾಲಿ ಇರುವ ಮನೆಗಳನ್ನು ಬಾಡಿಗೆಗೆ ನೀಡಲೂ ಸರ್ಕಾರ ಉದ್ದೇಶಿಸಿದೆ.
  • ಇಂಟರೆಸ್ಟ್‌ ಸಬ್ಸಿಡಿ ಸ್ಕೀಮ್‌ (ISS) ಬಗ್ಗೆ ತಿಳಿಯೋಣ. ಈ ಯೋಜನೆಯಲ್ಲಿ 2024ರ ಸೆಪ್ಟೆಂಬರ್‌ ಬಳಿಕ ವಿತರಣೆ ಅಥವಾ ಮಂಜೂರಾದ ಹೋಮ್‌ಲೋನ್‌ಗಳಿಗೆ ಬಡ್ಡಿ ಸಬ್ಸಿಡಿ ಸಿಗುತ್ತದೆ.

EWS, LIG ಮತ್ತು MIG ಕೆಟಗರಿಯಲ್ಲಿ ಅನುಕ್ರಮವಾಗಿ, ವಾರ್ಷಿಕ 3 ಲಕ್ಷ ರೂ, 6 ಲಕ್ಷ ರೂ. ಮತ್ತು 9 ಲಕ್ಷ ರೂ. ತನಕ ಆದಾಯ ಇರುವವರು ಈ ಬಡ್ಡಿ ಸಬ್ಸಿಡಿ ಪಡೆಯಬಹುದು. ಮನೆಯ ಖರೀದಿ, ಮರು ಖರೀದಿ, ನಿರ್ಮಾಣಕ್ಕೆ ಪಡೆಯುವ ಗೃಹ ಸಾಲಕ್ಕೆ ಈ ಬಡ್ಡಿ ಸಬ್ಸಿಡಿ ಸಿಗುತ್ತದೆ.

ಈ ಸಬ್ಸಿಡಿ ಯೋಜನೆಯಲ್ಲಿ ಸಾಲದ ಗರಿಷ್ಠ ಮೌಲ್ಯ 25 ಲಕ್ಷ ರೂ. ಇರಬೇಕು. ಮನೆಯ ಗರಿಷ್ಠ ಮೌಲ್ಯ 35 ಲಕ್ಷ ರೂ. ಇರಬೇಕು. ಸಬ್ಸಿಡಿ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಸಿಗಬೇಕಿದ್ದರೆ ಕನಿಷ್ಠ 8 ಲಕ್ಷ ರೂ. ಸಾಲ ಇರಬೇಕು.
ಸಬ್ಸಿಡಿ ಮೊತ್ತವು 5 ಕಂತುಗಳಲ್ಲಿ ಸಿಗುತ್ತದೆ. ಆದ್ದರಿಂದ 5 ವರ್ಷ ಸಾಲದ ಅಕೌಂಟ್‌ ಸಕ್ರಿಯವಾಗಿರಬೇಕು. ಬಳಿಕ ಸಬ್ಸಿಡಿ ಸಿಗುವುದಿಲ್ಲ. ಇದರಲ್ಲಿ ಗರಿಷ್ಠ 1 ಲಕ್ಷದ 80 ಸಾವಿರ ರೂ. ಬಡ್ಡಿ ಸಬ್ಸಿಡಿ ಸಿಗುತ್ತದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ -ಅರ್ಬನ್‌ 2.0 ಅಡಿಯಲ್ಲಿ ಬೇಕಾಗುವ ದಾಖಲಾತಿಗಳು ಹೀಗಿವೆ:

  • ಅರ್ಜಿದಾರರ ಆಧಾರ್‌ ಸಂಖ್ಯೆ, ಆಧಾರ್‌ ಪ್ರಕಾರ ಹೆಸರು, ಜನ್ಮ ದಿನಾಂಕ.
  • ಕುಟುಂಬದ ಸದಸ್ಯರ ಆಧಾರ್‌ ವಿವರಗಳನ್ನು ನೀಡಬೇಕಾಗುತ್ತದೆ.
  • ಬ್ಯಾಂಕ್‌ ಖಾತೆ ವಿವರಗಳು.
  • ಆದಾಯ ದೃಢೀಕರಣ ಪತ್ರ.
  • ಜಾತಿ/ ಸಮುದಾಯ ದೃಢೀಕರಣ.
  • ಭೂ ದಾಖಲೆ

ಪ್ರಧಾನ ಮಂತ್ರಿ ಆವಾಸ್‌ ಯೋಜನೆ-ಅರ್ಬನ್‌ 2.o ಯೋಜನೆಗೆ ಸಂಬಂಧಿಸಿ ಅರ್ಜಿ ಸಲ್ಲಿಸುವುದು ಹೇಗೆ?
PMAY-U 2.O ಸ್ಕೀಮ್‌ ಅಡಿಯಲ್ಲಿ ಸಬ್ಸಿಡಿ ಸೌಲಭ್ಯವನ್ನು ಪಡೆಯುವವರು PMAY-U 2.O ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಕಾಮನ್‌ ಸರ್ವೀಸ್‌ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ, ಮುನಿಸಿಪಾಲಿಟಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯ ಮೊದಲ ಹಂತದಲ್ಲಿ ನಗರ ಪ್ರದೇಶಗಳಲ್ಲಿ 1 ಕೋಟಿ 18 ಲಕ್ಷ ಮನೆಗಳಿಗೆ ಸಬ್ಸಿಡಿ ವಿತರಿಸಲು ಅನುಮೋದಿಸಲಾಗಿತ್ತು. ಈ ಪೈಕಿ 85 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈಗಾಗಲೇ ಸಬ್ಸಿಡಿ ವಿತರಣೆಯಾಗಿದೆ.

ಈ ಸುದ್ದಿಯನ್ನೂ ಓದಿ: Money Tips: ಬೆಸ್ಟ್ ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಯಾವುದು?