ನವದೆಹಲಿ; ಮಿತಿಮೀರಿದ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗರು ವಿಷಗಾಳಿ ಸೇವಿಸಿ ಬದುಕುವಂತಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತ್ವರಿತ ಕ್ರಮಕ್ಕಾಗಿ ಈಗಾಗಲೇ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಅದರ ಪರಿಣಾಮವಾಗಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಆಡಳಿತವು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿದೆ. ನ.27 ರಿಂದ ದೆಹಲಿಗೆ ಪೆಟ್ರೋಲ್, ಡೀಸೆಲ್ ವಾಹನಗಳ ಪ್ರವೇಶ ನಿರ್ಬಂಧಿಸ ಲಾಗಿದೆ.
ಡಿಸೆಂಬರ್ 3ನೇ ತಾರೀಖಿನವರೆಗೂ ಈ ನಿರ್ಬಂಧ ಜಾರಿಯಲ್ಲಿ ಇರಲಿದೆ. ದೆಹಲಿ ಪ್ರವೇಶಿಸಲು ಕೇವಲ ಸಿಎನ್ಜಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರವೇ ಅನುಮತಿ ನೀಡಲಾಗಿದೆ.
ಸರಕಾರಿ ನೌಕರರು ತಮ್ಮ ಕ್ವಾಟರ್ಸ್ಗಳಿಂದ ಕಚೇರಿಗೆ ತೆರಳಲು ಕೂಡ ಅನುಕೂಲವಾಗುವಂತೆ ದೆಹಲಿ ಸರಕಾರವೇ ಸಿಎನ್ಜಿ ಬಳಕೆಯ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ರಸ್ತೆಗಿಳಿಸಿದೆ. ಗುಲಾಬಿ ಬಾಗ್ ಮತ್ತು ನಿಮ್ರಿ ಕಾಲನಿಯಲ್ಲಿ ಈ ವಾಹನಗಳು ಸಂಚರಿಸಲಿವೆ ಎಂದು ದೆಹಲಿ ಸರಕಾರದ ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.
ಸಚಿವಾಲಯದಿಂದ ಸಮೀಪದ ಮೆಟ್ರೋ ಕೇಂದ್ರಗಳಿಗೆ ನಿರಂತರವಾಗಿ ಸಂಚರಿಸುವ ಸಿಎನ್ಜಿ ಬಳಕೆಯ ಶಟಲ್ ಬಸ್ಗಳನ್ನು ಹತ್ತು ನಿಮಿಷಕ್ಕೆ ಒಂದ ರಂತೆ ಸಂಚಾರ ಮಾಡಿಸಲಾಗುವುದು. ಎಲ್ಲ ಸರಕಾರಿ ನೌಕರರು ಸಾರ್ವಜನಿಕ ಸಾರಿಗೆಯನ್ನು ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಲಾಗಿದೆ.
ಮಕ್ಕಳು ಮನೆಯಿಂದಲೇ ಆನ್ಲೈನ್ ವಿದ್ಯಾಭ್ಯಾಸ ನಡೆಸಿ, ವಿಷಗಾಳಿ ಸೇವನೆಯಿಂದ ಪಾರಾಗಲಿ ಎಂದು ಸೂಚಿಸಿತ್ತು. ಜತೆಗೆ ಕಟ್ಟಡ ನಿರ್ಮಾಣ ಕಾಮ ಗಾರಿಗಳನ್ನು ಹಾಗೂ ಕಟ್ಟಡ ಕೆಡವುದನ್ನು ಕೂಡ ನಿರ್ಬಂಧಿಸಿತ್ತು. ಇದೇ ಸೋಮವಾರ ಕಟ್ಟಡ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ.