Tuesday, 7th January 2025

Pope Francis: 2025ರಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಪೋಪ್ ಫ್ರಾನ್ಸಿಸ್

Pope Francis

ನವದೆಹಲಿ: ಪೋಪ್ ಫ್ರಾನ್ಸಿಸ್ (Pope Francis) ಅವರು 2025ರಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಪೋಪ್‌ಗೆ ಭಾರತಕ್ಕೆ ಆಗಮಿಸಲು ಅಧಿಕೃತ ಆಹ್ವಾನ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಖುದ್ದಾಗಿ ಆಹ್ವಾನಿಸಿದ್ದಾರೆ ಎಂದು ಕೇಂದ್ರ ಸಚಿವ ಜಾರ್ಜ್ ಕುರಿಯನ್ (Union minister George Kurian) ಶನಿವಾರ ತಿಳಿಸಿದ್ದಾರೆ.

ಕ್ಯಾಥೋಲಿಕ್ ಚರ್ಚ್‌ನ ಜುಬಿಲಿ ವರ್ಷಾಚರಣೆ (Catholic Church Jubilee Year celebrations) 2025ರಲ್ಲಿ ನಡೆಯಲಿದ್ದು, ಆ ಬಳಿಕ ಪೋಪ್ ಫ್ರಾನ್ಸಿಸ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ವ್ಯಾಟಿಕನ್ ಅಂತಿಮ ವ್ಯವಸ್ಥೆ ಕೈಗೊಳ್ಳಲಿದ್ದು, ವೇಳಾಪಟ್ಟಿಯನ್ನು ನಿರ್ಧರಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರಿಂದ ಕಾರ್ಡಿನಲ್ ಆಗಿ ಆರ್ಚ್‌ಬಿಷಪ್ ಜಾರ್ಜ್ ಜಾಕೋಬ್ ಕೂವಕಾಡ್ ಅವರು ದೀಕ್ಷೆ ಸ್ವೀಕರಿಸಲಿದ್ದು, ಇದಕ್ಕಾಗಿ ವ್ಯಾಟಿಕನ್‌ಗೆ ಭೇಟಿ ನೀಡಿರುವ ನಿಯೋಗದಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಕುರಿಯನ್ ಕೂಡ ಸೇರಿದ್ದರು.

ಕೇರಳದ 51ನೇ ವಯಸ್ಸಿನ ಜಾರ್ಜ್ ಜಾಕೋಬ್ ಕೂವಕಾಡ್ ಅವರು, 2020ರಿಂದ ಪೋಪ್ ಫ್ರಾನ್ಸಿಸ್ ಅವರ ಅಂತಾರಾಷ್ಟ್ರೀಯ ಭೇಟಿಗಳನ್ನು ಆಯೋಜಿಸುತ್ತಿದ್ದಾರೆ. ಇದೀಗ ಕಾರ್ಡಿನಲ್ ಆಗಿ ಉನ್ನತೀಕರಣಗೊಂಡ 21 ಪಾದ್ರಿ ಸದಸ್ಯರಲ್ಲಿ ಅವರು ಒಬ್ಬರಾಗಿದ್ದಾರೆ.

Pope Francis

ಮಾನ್ಸಿಗ್ನರ್ ಎಂಬ ಬಿರುದನ್ನು ಹೊಂದಿರುವ ಕೂವಕಾಡ್ ಅವರನ್ನು ಟರ್ಕಿಯ ನಿಸಿಬಿಸ್‌ನ ಟೈಟುಲರ್ ಆರ್ಚ್‌ ಬಿಷಪ್ ಎಂದು ಹೆಸರಿಸಲಾಯಿತು ಎಂದು ಕೇಂದ್ರ ಸಚಿವ ಜಾರ್ಜ್ ಕುರಿಯನ್ ಹೇಳಿದ್ದಾರೆ.

ಕ್ಯಾಥೋಲಿಕ್ ಚರ್ಚ್ 2025 ಅನ್ನು ಯೇಸುಕ್ರಿಸ್ತನ ಜನ್ಮ ಜಯಂತಿ ವರ್ಷವಾಗಿ ಆಚರಿಸುತ್ತಿದೆ. ಪೋಪ್ ವರ್ಷವಿಡೀ ವಿಶ್ವದಾದ್ಯಂತ ಸಂಚಾರ ನಡೆಸಲಿದ್ದಾರೆ. ಮಾಹಿತಿಯ ಆಧಾರದ ಮೇಲೆ ಪೋಪ್ ಫ್ರಾನ್ಸಿಸ್ ಅವರು ಜುಬಿಲಿ ವರ್ಷದ ಅನಂತರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅವರ ಭೇಟಿ ಆದಷ್ಟು ಬೇಗ ಆಗಲಿದೆ ಎನ್ನುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಕ್ರಿಶ್ಚಿಯನ್ ಸಮುದಾಯವು ಪೋಪ್ ಅವರ ಭೇಟಿಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದೆ ಎಂದು ಕುರಿಯನ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Syria Crisis: ಸಿರಿಯಾದಲ್ಲಿ ಹೆಚ್ಚಿದ ಹಿಂಸಾಚಾರ; ಕೂಡಲೇ ದೇಶ ಬಿಡುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ

ಕಳೆದ ಜೂನ್‌ನಲ್ಲಿ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ7 ಔಟ್‌ರೀಚ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದು, ಭಾರತಕ್ಕೆ ಆಹ್ವಾನಿಸಿದ್ದರು.