Sunday, 27th October 2024

Prakash Raj: ʻಗೌರಿ ಹತ್ಯೆ ಮತ್ತು ಮಗನ ಅಗಲಿಕೆ ಬದುಕಿನ ಅತಿ ದೊಡ್ಡ ದುರಂತ…ʼ ಭಾರೀ ವೈರಲ್‌ ಆಗ್ತಿದೆ ಪ್ರಕಾಶ್‌ ರಾಜ್ ಈ ವಿಡಿಯೋ

Prakash Raj

ನವದೆಹಲಿ: ಬಹಭಾಷಾ ನಟ ಪ್ರಕಾಶ್‌ ರಾಜ್‌(Prakash Raj) ಕೇವಲ ತಮ್ಮ ನಟನೆ ಮಾತ್ರವಲ್ಲದೇ ವಿವಾದಾತ್ಮಕ ಅಥವಾ ತೀಕ್ಷ್ಣ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಪುತ್ರ ಮತ್ತು ಚಿಂತಕಿ ಗೌರಿ ಲಂಕೇಶ್‌(Gauri Lankesh) ಸಾವಿನ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ. ಸಂದರ್ಶನದಲ್ಲಿ ತಮ್ಮ ಪುತ್ರ ಸಿದ್ದಾರ್ಥ ಮತ್ತು ಗೌರಿ ಲಂಕೇಶ್‌ ಅವರನ್ನು ಸ್ಮರಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ನೇಹಿತೆ ಗೌರಿಯನ್ನು ಕೇವಲ ನಿರ್ಭೀತಿಯಿಂದ ಮಾತನಾಡುತ್ತಾಳೆ ಎಂಬ ಏಕೈಕ ಕಾರಣದಿಂದ ಆಕೆಯನ್ನು ಬರ್ಬರವಾಗಿ ಗುಂಡಿಕ್ಕಿ ಕೊಂದರು. ಕೆಲವು ವ್ಯಕ್ತಿಗಳು ಮರೆಯಾದರೂ ಅವರ ಸಾವು ಎಂದಿಗೂ ಕಾಡುತ್ತದೆ. ನಾನು ಗೌರಿಯನ್ನು ಹೂಳಲಿಲ್ಲ.. ಭೂಮಿಯಲ್ಲಿ ಬಿತ್ತಿದ್ದೇನೆ ಎಂದು ತಮ್ಮ ಸ್ನೇಹಿತೆಯನ್ನು ಪ್ರಕಾಶ್‌ ರಾಜ್‌ ಸ್ಮರಿಸಿದ್ದಾರೆ. ಸದಾ ಎಡ ಪಂಥೀಯ ವಿಚಾರಧಾರೆಗಳಿಗೆ ಬೆಂಬಲ ಕೊಡುವಂತಹ ಹೇಳಿಕೆ ನೀಡುವ ಪ್ರಕಾಶ್‌ ರಾಜ್‌ ಅವರ ಈ ಹೇಳಿಕೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

ಎಬಿಪಿ ಸದರ್ನ್ ರೈಸಿಂಗ್ ಶೃಂಗಸಭೆ 2024ರಲ್ಲಿ ಮಾತನಾಡಿದ ಅವರು, ಕೆಲವರ ಅಗಲಿಕೆಯ ನೋವು ಎಂದಿಗೂ ಕಡಿಮೆ ಆಗುವುದೇ ಇಲ್ಲ. ಅದಾಗ್ಯೂ ನಾವು ಜೀವನದ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸುವ ಅಗತ್ಯ ಇದೆ. ನೋವು ತುಂಬಾ ವೈಯಕ್ತಿಕ ವಿಷಯ, ಅದು ನನ್ನ ಸ್ನೇಹಿತೆ ಗೌರಿ (ಗೌರಿ ಲಂಕೇಶ್) ಅಥವಾ ನನ್ನ ಮಗ ಸಿದ್ಧಾರ್ಥ್ ಸಾವೇ ಆಗಿರಲಿ…ಅದರ ನೋವು ಸುಲಭವಾಗಿ ಕಡಿಮೆ ಆಗುವುದಿಲ್ಲ. ನಾನು ಸ್ವಾರ್ಥಿಯಾಗಲು ಸಾಧ್ಯವಿಲ್ಲ. ನನಗೆ ಹೆಣ್ಣುಮಕ್ಕಳಿದ್ದಾರೆ, ನನಗೆ ಕುಟುಂಬವಿದೆ, ನನಗೆ ವೃತ್ತಿ ಇದೆ. ನನಗೆ ಮನುಷ್ಯರಿದ್ದಾರೆ, ನನಗೆ ಜೀವನವಿದೆ ಮತ್ತು ಅದಕ್ಕೆ ನಾನು ಜವಾಬ್ದಾರನಾಗಿರುತ್ತೇನೆ ಎಂದಿದ್ದಾರೆ.

ನನ್ನ ನೋವುಗಿಂತ ನನ್ನ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಏಕೆಂದರೆ ಅದು ವೈಯಕ್ತಿಕ ನೋವನ್ನು ಕಡಿಮೆ ಮಾಡುತ್ತದೆ ಮತ್ತು ನಾನು ಅದರ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಕೆಲವು ನೋವುಗಳು ಬಹಳ ಕಾಡುತ್ತವೆ. ನಮ್ಮನ್ನು ಕೆಲವೊಮ್ಮೆ ಅಸಾಯಕನ್ನಾಗಿ ಮಾಡುತ್ತವೆ. ಬದುಕಲು ಕಾರಣಗಳನ್ನು ಹುಡುಕೋಣ. ಸಾವು ಯಾವಾಗಲೂ ಶಾಶ್ವತ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರ ಜನ್ಮದಿನದ ಹಿನ್ನೆಲೆ ಎಕ್ಸ್‌ನಲ್ಲಿ ಪ್ರಕಾಶ್‌ ರಾಜ್‌, ಪೋಸ್ಟ್‌ ಮಾಡಿದ್ದೂ, ಇದು ಭಾರೀ ಸಂಚಲನ ಮೂಡಿಸಿತ್ತು. ಮಹಾತ್ಮ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಫೋಟೋಗಳನ್ನು ಅವರವರ ಘೋಷ ವಾಕ್ಯ, ಹೇಳಿಕೆಗಳ ಜತೆ ಪ್ರಕಾಶ್‌ ರಾಜ್‌ ಪೋಸ್ಟ್‌ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: Prakash Raj:‌ ಭಾರೀ ಸಂಚಲನ ಮೂಡಿಸಿದ ಪ್ರಕಾಶ್‌ ರಾಜ್‌ ಟ್ವೀಟ್‌; ಗಾಂಧಿ ಜಯಂತಿ ಪೋಸ್ಟ್‌ನಲ್ಲೇನಿತ್ತು?