Friday, 20th December 2024

Priyanka Gandhi : ಬ್ಯಾಗ್‌ ಹಿಡಿದು ಬರುತ್ತಿದ್ದ ಪ್ರಿಯಾಂಕಾ ಗಾಂಧಿಗೆ ಸಿಖ್‌ ದಂಗೆಯ ಫೋಟೋ ಇರುವ ಚೀಲ ಗಿಫ್ಟ್‌ ಕೊಟ್ಟ ಬಿಜೆಪಿ ಸಂಸದೆ !

Priyanka Gandhi

ನವದೆಹಲಿ: ಈ ಬಾರಿಯ ಲೋಕ ಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೆಲ ಹೈಡ್ರಾಮಾಗಳು ನಡೆದಿದ್ದು, ಅದರಲ್ಲಿ ಕಾಂಗ್ರೆಸ್‌ ನಾಯಕಿ ಹಾಗೂ ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಅವರ ಬ್ಯಾಗ್‌ ಭಾರೀ ಸದ್ದು ಮಾಡಿತ್ತು. ಮೊದಲು ಮೋದಿ , ಅದಾನಿ ಇರುವ ಬ್ಯಾಗ್‌ ಹಿಡಿದು ಬಂದಿದ್ದ ಸಂಸದೆ, ನಂತರ ಪ್ಯಾಲಿಸ್ತೀನ್‌ ಹಾಗೂ ಬಾಂಗ್ಲಾದೇಶ ರಕ್ಷಿಸಿ ಎಂಬ ಬರಹ ಇರುವ ಬ್ಯಾಗ್‌ ಹಾಕಿಕೊಂಡು ಬಂದಿದ್ದರು. ಇದೀಗ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ (Aparajita Sarangi) ಅವರು 1984 ರ ಸಿಖ್ ದಂಗೆಯ( 1984 Sikh riots) ರಕ್ತದ ಚಿಮ್ಮುವ ಫೋಟೋವನ್ನು ಒಳಗೊಂಡಿರುವ ಬ್ಯಾಗ್ ಅನ್ನು ಪ್ರಿಯಾಂಕಾ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

1984 ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರವನ್ನು ಎತ್ತಿ ತೋರಿಸಲು ಪ್ರಯತ್ನಿಸಿದ ಸಂಸದೆ ಸಾರಂಗಿ ಪ್ರಿಯಾಂಕಾ ಗಾಂಧಿಯವರಿಗೆ ಬ್ಯಾಗ್‌ನ್ನು ನೀಡಿದ್ದಾರೆ. ನಗು ಮುಖದಿಂದ ಪ್ರಿಯಾಂಕಾ ಗಾಂಧಿ ಚೀಲವನ್ನು ಸ್ವೀಕರಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಗಮನಾರ್ಹವೆಂದರೆ, ಅಕ್ಟೋಬರ್ 31, 1984 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಿಖ್ ವಿರೋಧಿ ದಂಗೆಗಳಿಗೆ ಕಾಂಗ್ರೆಸ್ ಪಕ್ಷವನ್ನು ದೂಷಿಸಲಾಗಿದೆ. ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಗಲಭೆಗಳಲ್ಲಿ ಸಾವಿರಾರು ಸಿಖ್ಖರು ಕ್ರೂರವಾಗಿ ಹತ್ಯೆಯಾಗಿದ್ದರು.

ಎನ್‌ಡಿಎ ಮತ್ತು ಇಂಡಿಯಾ ಮೈತ್ರಿ ಕೂಟದ ಸಂಸದರು ಭಾಗವಹಿಸಿದ್ದ ಪ್ರತಿಭಟನೆಯಲ್ಲಿ ಇಬ್ಬರು ಬಿಜೆಪಿ ಸಂಸದರು ಗಾಯಗೊಂಡ ಘಟನೆಗೆ ಬಿಜೆಪಿ ರಾಹುಲ್‌ ಗಾಂಧಿ ವಿರುದ್ಧ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ತನ್ನ ಸಹೋದರನನ್ನು ಸಮರ್ಥಿಸಿಕೊಂಡರು.

ಇದು ಸರ್ಕಾರದ ಹತಾಶೆಯ ಪ್ರತೀಕ. ಇದು ಸುಳ್ಳು ಎಫ್‌ಐಆರ್. ರಾಹುಲ್ ಗಾಂಧಿ ಯಾರನ್ನೂ ತಳ್ಳಲು ಸಾಧ್ಯವಿಲ್ಲ-ನಾನು ಅವರ ಸಹೋದರಿ, ಇದು ನನಗೆ ತಿಳಿದಿದೆ, ಇದು ದೇಶಕ್ಕೆ ತಿಳಿದಿದೆ, ಬಿಜೆಪಿಗರು ಎಷ್ಟು ಹತಾಶರಾಗಿದ್ದಾರೆ ಎಂದು ದೇಶವು ಗಮನಿಸುತ್ತಿದೆ. ಅವರಿಗೆ ಅದಾನಿ ಬಗ್ಗೆ ಚರ್ಚೆ ಬೇಡ, ಅಂಬೇಡ್ಕರ್ ಅವರನ್ನು ಅವಮಾನಿಸುತ್ತಾರೆ. ಆದರೆ ಅಂಬೇಡ್ಕರ್ ಅವರಿಗೆ ಅವಮಾನವಾದರೆ ದೇಶ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : ತನಗೆ ಬೇಕಾದುದನ್ನು ಧರಿಸುವುದು ಮಹಿಳೆಯ ಹಕ್ಕು: ಪ್ರಿಯಾಂಕಾ ಗಾಂಧಿ