Friday, 27th December 2024

Proba-3 Satellites: ಇಸ್ರೋದ ಸಾಧನೆಗೆ ಮತ್ತೊಂದು ಗರಿ-ಪ್ರೋಬಾ-3 ನೌಕೆ ಯಶಸ್ವಿ ಉಡಾವಣೆ

isro

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಗುರುವಾರ ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆಯ(ESA) ಪ್ರೋಬಾ-3 ನೌಕೆ(Proba-3 Satellites)ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ನಿನ್ನೆ ತಾಂತ್ರಿಕ ದೋಷದಿಂದ ಉಡಾವಣಾ ಕಾರ್ಯವನ್ನು ಇಂದಿಗೆ ಮುಂದೂಡಲಾಗಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನಿಲ್ದಾಣದಿಂದ ಇಂದು ಸಂಜೆ 4 ಗಂಟೆ 4 ನಿಮಿಷಕ್ಕೆ ಪಿಎಸ್‌ಎಲ್‌ವಿ ಸಿ59 ರಾಕೆಟ್‌ಅನ್ನು ಯಶಸ್ವಿ ಉಡಾವಣೆ ನಡೆದಿದೆ.

550 ಕೆಜಿ ತೂಕದ ಪ್ರೋಬಾ 3 ಮಿಷನ್ ಅನ್ನು ಹೊತ್ತು ಪಿಎಸ್‌ಎಲ್‌ವಿ ಸಿ59 ರಾಕೆಟ್‌ ಮೂಲಕ ನಭಕ್ಕೆ ಹಾರಿದ್ದು, ಈ ಯೋಜನೆ ಭಾರತದ ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಪ್ರದರ್ಶಿಸಿ, ವಿಜ್ಞಾನಿಗಳಿಗೆ ಸೂರ್ಯನನ್ನು ಹೊಸ ರೀತಿಯಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಿದೆ.

ಈ ಉಪಗ್ರಹ ಉಡಾವಣೆಗೊಂಡ 18 ನಿಮಿಷಗಳ ಬಳಿಕ ರಾಕೆಟ್‌ನಿಂದ ಬೇರ್ಪಡಲಿದೆ. ಅದಾಗಿ ಅಂದಾಜು 15 ನಿಮಿಷಗಳ ಬಳಿಕ, ಬೆಲ್ಜಿಯಂನ ರೆಡುವಿನಲ್ಲಿರುವ ಇಎಸ್ಎಯ ಯುರೋಪಿಯನ್ ಸ್ಪೇಸ್ ಸೆಕ್ಯುರಿಟಿ ಆ್ಯಂಡ್ ಎಜುಕೇಶನ್ ಸೆಂಟರ್ (ಇಎಸ್ಇಸಿ) ಹಾರಾಟ ನಿಯಂತ್ರಣ ತಂಡ ಉಪಗ್ರಹದಿಂದ ಮೊದಲ ಸಂದೇಶಗಳನ್ನು ಪಡೆಯಲಿದೆ.

ಪ್ರೊಬಾ-3 ಬಾಹ್ಯಾಕಾಶ ಕಾರ್ಯಾಚರಣೆ

ಈ ಉಪಗ್ರಹಗಳು ಅಂದುಕೊಂಡ ರೀತಿಯಲ್ಲೇ ಕಾರ್ಯ ನಿರ್ವಹಿಸಿದರೆ, ಅವುಗಳು ಸೂರ್ಯನಿಗೆ ಅತ್ಯಂತ ಸಮರ್ಪಕವಾಗಿ ಎದುರಾಗುತ್ತವೆ. ಮೊದಲ ಉಪಗ್ರಹ ಸೂರ್ಯನ ಪ್ರಖರ ಕಿರಣಗಳನ್ನು ತಡೆಗಟ್ಟಿ, ಎರಡನೇ ಉಪಗ್ರಹದ ಮೇಲೆ ಒಂದು ನೆರಳನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ, ಎರಡನೇ ಉಪಗ್ರಹದಲ್ಲಿರುವ ವೈಜ್ಞಾನಿಕ ಉಪಕರಣಗಳಿಗೆ ಸೂರ್ಯನ ವಾತಾವರಣದ ಹೊರಗಿನ ಪದರವಾದ ಕೊರೋನಾವನ್ನು ಅತ್ಯಂತ ವಿಸ್ತೃತವಾಗಿ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ವಿಜ್ಞಾನಿಗಳು ಸೂರ್ಯ ಗ್ರಹಣದ ಸಮಯದಲ್ಲಿ ಮಾತ್ರವೇ ಸೂರ್ಯನ ವಾತಾವರಣದ ಹೊರ ಪದರವನ್ನು ಅಧ್ಯಯನ ಮಾಡುತ್ತಾರೆ. ಸೂರ್ಯ ಗ್ರಹಣದ ಸಂದರ್ಭದಲ್ಲಿ, ಸೂರ್ಯನ ಪ್ರಖರ ಬೆಳಕನ್ನು ಚಂದ್ರ ತಡೆಗಟ್ಟುವ ಕಾರಣದಿಂದ, ಕೊರೋನಾ ಭೂಮಿಗೆ ಕಾಣಿಸುತ್ತದೆ. ಸೌರ ಕರೋನಾಗ್ರಾಫ್ ಅನ್ನು ರಚಿಸಲು ಎರಡು ಬಾಹ್ಯಾಕಾಶ ನೌಕೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ, ಇದು ವಿಜ್ಞಾನಿಗಳಿಗೆ ಸೂರ್ಯನ ಕರೋನಾವನ್ನು-ಅದರ ವಾತಾವರಣದ ಹೊರಗಿನ ಪದರವನ್ನು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ.

200 ಮಿಲಿಯನ್ ಯೂರೋ ವೆಚ್ಚ

200 ಮಿಲಿಯನ್ ಯೂರೋ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಪ್ರೋಬಾ-3 ಯೋಜನೆ, ವಿಜ್ಞಾನಿಗಳು ಸೂರ್ಯನ ಕೊರೋನಾದ ಅಧ್ಯಯನ ನಡೆಸುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಗುರಿ ಹೊಂದಿದೆ. ಪ್ರೋಬಾ-3 ಪ್ರತಿ ವರ್ಷವೂ 50 ಕೃತಕ ಸೂರ್ಯ ಗ್ರಹಣಗಳನ್ನು ಉಂಟುಮಾಡಲಿದ್ದು, ಪ್ರತಿಯೊಂದು ಗ್ರಹಣವೂ ಗರಿಷ್ಠ ಆರು ಗಂಟೆಗಳ ಕಾಲ ಇರಲಿದೆ. ಇದು ನೈಸರ್ಗಿಕ ಗ್ರಹಣಗಳಿಗೆ ಹೋಲಿಸಿದರೆ, ಸೂರ್ಯನನ್ನು ಗಮನಿಸಲು ಬಹಳಷ್ಟು ಹೆಚ್ಚಿನ ಸಮಯ ಒದಗಿಸುತ್ತದೆ.

ಈ ಸುದ್ದಿಯನ್ನೂ ಓದಿ: ISRO missions: 2026ರಲ್ಲಿ ಗಗನಯಾನ, 2028ರಲ್ಲಿ ಚಂದ್ರಯಾನ-4; ಇಸ್ರೋದಿಂದ ಮಹತ್ವದ ಘೋಷಣೆ