Saturday, 14th December 2024

ಕೋವಿಡ್‌’ನಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ: ಸೋನಿಯಾ ಪತ್ರ

ನವದೆಹಲಿ: ಕೋವಿಡ್-19 ಪಿಡುಗಿಗೆ ಒಳಗಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ದುರಂತದ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯದ ಭರವಸೆ ನೀಡಬೇಕಾಗಿದೆ. ನವೋದಯ ವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ಒದಗಿಸಲು ಒತ್ತು ನೀಡಬೇಕು ಎಂದೂ ಸಲಹೆ ಮಾಡಿದ್ದಾರೆ. ತಂದೆ, ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡಿರುವ ಅನೇಕ ನಿದರ್ಶನಗಳಿವೆ.

ಅಂತಹ ಮಕ್ಕಳ ಜೊತೆಗೆ ದೇಶ ನಿಲ್ಲಬೇಕಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ತಮ್ಮ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಿದ್ದರು. ದೇಶದಾದ್ಯಂತ ಇಂಥ 661 ಶಾಲೆಗಳಿವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.