Friday, 20th September 2024

ಪಕ್ಷ ವಿರೋಧಿ ಚಟುವಟಿಕೆ: ಪುದುಚೇರಿಯ ಲೋಕೋಪಯೋಗಿ ಸಚಿವ ರಾಜೀನಾಮೆ

ಪುದುಚೇರಿ: ಪುದುಚೇರಿಯ ಲೋಕೋಪಯೋಗಿ ಖಾತೆ ಸಚಿವ ಎ.ನಮಶಿವಾಯಂ ಅವರು ಸೋಮವಾರ ತಮ್ಮ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಕಾರಣ ನಮಶಿವಾಯಂ ರನ್ನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು. ಕಾಂಗ್ರೆಸ್‌ನ ಮತ್ತೊಬ್ಬ ಶಾಸಕ ಈ.ತಿಪ್ಪೈನಾಥನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸ್ಪೀಕರ್‌ ವಿ.ಪಿ.ಶಿವಕೊಲುಂಡು ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ.

ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಪುದುಚೇರಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಮಶಿವಾಯಂ ಅವರು ಬಿಜೆಪಿ ಸೇರಲು ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ. ನಮಶಿವಾಯಂ ಅವರು ವಿಳ್ಳಿಯನೂರು ವಿಧಾನಸಭಾ ಕ್ಷೇತ್ರ ವನ್ನು ಪ್ರತಿನಿಧಿಸಿದರೆ, ತಿಪ್ಪೈನಾಥನ್‌ ಅವರು ಒಸುಡು ಮೀಸಲು ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದರು.

ಪಕ್ಷಾಂತರ ವಿರೋಧಿ ಕಾಯ್ದೆಯಡಿಯಲ್ಲಿ ಹೋದ ಜುಲೈನಲ್ಲಿ ಕಾಂಗ್ರೆಸ್‌ ಶಾಸಕ ಎನ್‌.ಧನವೇಲು ಅವರನ್ನು ಸ್ಪೀಕರ್‌ ಅನರ್ಹಗೊಳಿಸಿದ್ದರು.