Saturday, 28th December 2024

Punjab Serial Killer: 18 ತಿಂಗಳಲ್ಲಿ 11 ಕೊಲೆ; ಸರಣಿ ಹಂತಕನ ಕೃತ್ಯ ಬಯಲಾಗಿದ್ದು ಹೇಗೆ?

ಛಂಡಿಗಡ್:‌ ಕಳೆದ 18 ತಿಂಗಳಲ್ಲಿ 11 ಜನರನ್ನು ಬರ್ಬರವಾಗಿ ಕೊಲೆ ಮಾಡಿದ ಸರಣಿ ಹಂತಕನೋರ್ವನನ್ನು ಪಂಜಾಬ್‌ನ ರೂಪನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹೋಶಿಯಾರ್ ಪುರ ಜಿಲ್ಲೆಯ ಚೌರಾ ಗ್ರಾಮದ ರಾಮ್ ಸರೂಪ್ ಅಲಿಯಾಸ್ ಸೋಧಿ ಎಂದು ಗುರುತಿಸಲಾಗಿದೆ. ಸೋಮವಾರ(ಡಿ. 24) ಪ್ರಕರಣವೊಂದಕ್ಕೆ ಸಂಬಂಧಿಸಿ ಈತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಈತ ಕುಖ್ಯಾತ ಸರಣಿ ಹಂತಕ ಎಂಬುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ (Punjab Serial Killer).

ಈತ ಕೊಲೆ ಮಾಡಿದ 11 ಮಂದಿ ಕೂಡ ಪುರುಷರಾಗಿದ್ದಾರೆ. ಈತ ಲಿಫ್ಟ್‌ ನೀಡುವ ನೆಪದಲ್ಲಿ ಜನರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಬಳಿಕ ಅವರನ್ನು ದರೋಡೆ ಮಾಡಿ ಕೊಲೆಗೈಯುತ್ತಿದ್ದ ಎನ್ನುವುದನ್ನು ಪೊಲೀಸರು ತನಿಖೆಯ ವೇಳೆ ಕಂಡುಕೊಂಡಿದ್ದಾರೆ.

ರೂಪನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಖುರಾನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿನ ಘೋರ ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಕಿರಾತ್ಪುರ ಸಾಹಿಬ್ ಪಟ್ಟಣದಲ್ಲಿನ ಕೊಲೆ ಪ್ರಕರಣವೊಂದನ್ನು ಉಲ್ಲೇಖಿಸಿದ ಅವರು, ಟೋಲ್ ಪ್ಲಾಝಾದಲ್ಲಿ ಚಹಾ ಮತ್ತು ನೀರು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಆ. 18ರಂದು ಕೊಲೆ ಮಾಡಲಾಗಿದೆ. ಈ ಪ್ರಕರಣದ ತನಿಖೆಗೆ ಸಂಬಂಧಿಸಿ ರಾಮ್ ಸರೂಪ್‌ನನ್ನು ಬಂಧಿಸಲಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಈತ ನಡೆಸಿರುವ ಹೆಚ್ಚಿನ ಕೃತ್ಯ ಬಯಲಾಗಿದೆ ಎಂದು ಹೇಳಿದ್ದಾರೆ.

ವಿಚಾರಣೆ ವೇಳೆ ಆರೋಪಿ ಈ ಪ್ರಕರಣವಲ್ಲದೆ ಇತರ 10 ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಹಿಳೆಯರ ರೀತಿ ಉಡುಪು ಧರಿಸಿ ಲಿಫ್ಟ್‌ ಕೊಡುವ ನೆಪದಲ್ಲಿ ಕಾರಿನೊಳಗೆ ಕೂರಿಸಿಕೊಳ್ಳುತ್ತಿದ್ದ. ಆತನ ಲೈಂಗಿಕ ಕೃತ್ಯದ ಬಗ್ಗೆಯು ತನಿಖೆಯಿಂದ ಗೊತ್ತಾಗಿದೆ. ಫತೇಘರ್ ಸಾಹಿಬ್ ಮತ್ತು ಹೋಶಿಯಾರ್ ಪುರ ಜಿಲ್ಲೆಗಳಲ್ಲಿ ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಕೆಲವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಇನ್ನು ಕೆಲವರ ಕೊಲೆಗೆ ಇಟ್ಟಿಗೆಯಂತಹ ವಸ್ತುಗಳನ್ನು ಬಳಸುತ್ತಿದ್ದ ಎಂದು ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Haryana Horror: ಹಾಡಹಗಲೇ ಎಲ್ಲರದುರೇ ಬಾಲಕನನ್ನು ಇರಿದು ಕೊಂದ ದುರುಳರು; ರಕ್ಷಣೆಗೆ ಎಷ್ಟೇ ಕೂಗಿದರೂ ನೆರವಿಗೆ ಬಾರದ ಜನ!