Monday, 6th January 2025

R Chidambaram : ಫೋಖ್ರಾನ್‌ ಪರಮಾಣು ಪರೀಕ್ಷೆಯ ವಿಜ್ಞಾನಿ ಆರ್‌ ಚಿದಂಬರಂ ನಿಧನ

R Chidambaram

ಮುಂಬೈ : ಪರಮಾಣು ಶಕ್ತಿ ಆಯೋಗದ ಮಾಜಿ ಮುಖ್ಯಸ್ಥ (nuclear scientist) ಮತ್ತು ಭಾರತದ ಪರಮಾಣು ಕಾರ್ಯಕ್ರಮದ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಡಾ. ರಾಜಗೋಪಾಲ ಚಿದಂಬರಂ (R Chidambaram) ಅವರು ತಮ್ಮ 88 ನೇ ವಯಸ್ಸಿನಲ್ಲಿ ಶನಿವಾರ ಬೆಳಿಗ್ಗೆ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

1936 ರಲ್ಲಿ ಚೆನ್ನೈನಲ್ಲಿ ಜನಿಸಿದ ಚಿದಂಬರಂ ಅವರು ಆರಂಭಿಕ ಶಿಕ್ಷಣವನ್ನು ಚೆನ್ನೈನ ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮುಗಿಸಿ, ನಂತರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಪಿಎಚ್‌ಡಿ ಪಡೆದುಕೊಂಡಿದ್ದರು. ನಂತರ 1962 ರಲ್ಲಿ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (BARC) ಗೆ ಸೇರಿದರು . 1974ರ ಮೇ 18 ರಂದು ಭಾರತ ರಾಜಸ್ಥಾನದ ಫೋಕ್ರಾನ್‌ನಲ್ಲಿ ಮೊದಲ ಬಾರಿಗೆ ಪರಮಾಣು ಪರೀಕ್ಷೆಯನ್ನು ನಡೆಸಿತ್ತು. ಅದರಲ್ಲಿ ಭಾಗವಹಿಸಿದ್ದ ಕೆಲವೇ ವಿಜ್ಞಾನಿಗಳ ಪೈಕಿ ಆರ್‌. ಚಿದಂಬರಂ ಕೂಡ ಒಬ್ಬರಾಗಿದ್ದರು. ಅವರ ಈ ಸಾಧನೆಗೆ ಭಾರತ ಸರ್ಕಾರ 1975 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

1998 ರಲ್ಲಿ ಫೋಕ್ರಾನ್‌ನಲ್ಲಿ (pokhran nuclear test) ಎರಡನೇ ಬಾರಿಗೆ ಅಟಲ್‌ ಬಿಹಾರಿ ವಾಜಪೇಯ್‌ ನೇತೃತ್ವದ ಸರ್ಕಾರ ಪರಮಾಣು ಪರೀಕ್ಷೆಯನ್ನು ನಡೆಸಿತ್ತು. ಆ ಪರೀಕ್ಷೆಯಲ್ಲೂ ಚಿದಂಬರಂ ಅವರು ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಚಿದಂಬರಂ ಅವರು 1990 ರಲ್ಲಿ BARC ನ ನಿರ್ದೇಶಕರಾಗಿ ಮತ್ತು ನಂತರ 1993 ರಲ್ಲಿ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾದರು, ಅವರು 2000 ರವರೆಗೆ ಈ ಹುದ್ದೆಯನ್ನು ಹೊಂದಿದ್ದರು. ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಪರಮಾಣು ಶಕ್ತಿ ಆಯೋಗದಿಂದ ನಿವೃತ್ತರಾದ ಕೂಡಲೇ, ಚಿದಂಬರಂ ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪ್ರಧಾನ ವೈಜ್ಞಾನಿಕ ಸಲಹೆಗಾರರಾದರು, 1998 ರ ಪರೀಕ್ಷೆಗಳ ನಂತರ 1999 ರಲ್ಲಿ ಈ ಹುದ್ದೆಯನ್ನು ರಚಿಸಲಾಯಿತು. ಅವರು 17 ವರ್ಷಗಳಿಗೂ ಹೆಚ್ಚು ಕಾಲ ಈ ಸ್ಥಾನವನ್ನು ಹೊಂದಿದ್ದರು, ಮುಖ್ಯವಾಗಿ ಪರಮಾಣು ಪರೀಕ್ಷೆಗಳ ತೆರೆಮರೆಯ ಕಾರ್ಯ ನಿರ್ವಹಣೆಯಲ್ಲಿ ತೊಡಗಿದ್ದರು. ಅಂತರರಾಷ್ಟ್ರೀಯ ಪರಮಾಣು ವಾಣಿಜ್ಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸಲು ಚಿದಂಬರಂ ಅವರ ಪಾತ್ರ ಪ್ರಮುಖವಾಗಿದೆ.

ಈ ಸುದ್ದಿಯನ್ನೂ ಓದಿ : Manmohan Singh: ಸರ್ಕಾರಿ ಗೌರವಗಳೊಂದಿಗೆ ಇಂದು ಮನಮೋಹನ್‌ ಸಿಂಗ್‌ ಅಂತ್ಯಕ್ರಿಯೆ