Thursday, 24th October 2024

ನಾಲ್ಕನೆ ಬಾರಿ ಇಡಿ ವಿಚಾರಣೆ ಎದುರಿಸಿದ ರಾಗಾ

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಸೋಮವಾರ ಜಾರಿ ನಿರ್ದೇಶನಾಲಯದ ಕಚೇರಿಗೆ ನಾಲ್ಕನೆ ಬಾರಿ ಹಾಜರಾಗಿ ವಿಚಾರಣೆ ಎದುರಿಸಿದರು.

ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಮುಂದು ವರೆಸಿದ್ದು, ಕಾಂಗ್ರೆಸ್‍ನ ಸಂಸದರ ನಿಯೋಗ ದೆಹಲಿಯಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ದೂರು ನೀಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾ ಲಯದ ಸಮನ್ಸ್ ಆಧರಿಸಿ ರಾಹುಲ್‍ಗಾಂಧಿ ಇಂದು ವಿಚಾರಣೆಗೆ ಹಾಜರಾದರು. ಕಳೆದ ವಾರ ಮಂಗಳವಾರದಿಂದ ಗುರುವಾರ ದವರೆಗೂ ಸತತ ಮೂರು ದಿನ, ದಿನವೊಂದಕ್ಕೆ 10 ಗಂಟೆಯಂತೆ 30 ಗಂಟೆ ರಾಹುಲ್‍ಗಾಂಧಿ ವಿಚಾರಣೆಗೆ ಒಳಗಾಗಿದ್ದರು.

ಜಾರಿ ನಿದೇರ್ಶನಾಲಯದ ವಿಚಾರಣೆ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿರುವ ತಾಯಿ ಸೋನಿಯಾ ಗಾಂಧಿ ಅವರ ಅನಾರೋಗ್ಯ ದಿಂದ ಜರ್ಝರಿತರಾಗಿದ್ದ ರಾಹುಲ್ ಗಾಂಧಿ ಕಾಂಗ್ರೆಸ್ ಆಯೋಜಿಸಿದ್ದ ಅಗ್ನಿಪಥ್ ವಿರುದ್ಧ ಹೋರಾಟದಲ್ಲೂ ಭಾಗವಹಿಸಿ ರಲಿಲ್ಲ.

ಆಸ್ಪತ್ರೆಯಲ್ಲಿದ್ದು ತಾಯಿ ಆರೋಗ್ಯ ನೋಡಿಕೊಂಡಿದ್ದ ರಾಹುಲ್‍ಗಾಂಧಿ ಸಾರ್ವಜನಿಕ ವಾಗಿಯೂ ಕಾಣಿಸಿಕೊಂಡಿರಲಿಲ್ಲ. ಇಂದು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವ ಮುನ್ನಾ ಸಹೋದರಿ ಪ್ರಿಯಾಂಕ ಗಾಂಧಿ ರಾಹುಲ್‍ ಗಾಂಧಿ ಅವರಿಗೆ ಜೊತೆಯಾಗಿ ಬೆಂಬಲ ನೀಡಿದರು.

ಯಂಗ್ ಇಂಡಿಯಾ ಕಂಪೆನಿ ಅಸೋಷಿಯೆಟ್ ಜನರಲ್ ಸಂಸ್ಥೆಯಿಂದ ನ್ಯಾಷನಲ್ ಹೆರಾಲ್ಡ್ ಸೇರಿದಂತೆ ಇತರ ಪತ್ರಿಕೆಗಳನ್ನು ಸ್ವಾದೀನ ಪಡಿಸಿಕೊಂಡ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ರಾಹುಲ್‍ಗಾಂಧಿ, ಯಂಗ್ ಇಂಡಿಯಾ ಒಂದು ಲಾಭ ರಹಿತ ವಾದ ಸ್ವಯಂ ಸೇವಾ ಸಂಸ್ಥೆ. ಅದರ ಯಾವ ಹಣಕಾಸಿನಲ್ಲಿ ನಾವು ಸ್ವಂತಕ್ಕೆ ಒಂದು ಪೈಸೆಯನ್ನು ಬಳಸಿಕೊಂಡಿಲ್ಲ, ದುರುಪಯೋಗ ಕೂಡ ಆಗಿಲ್ಲ.

ಸಂಸ್ಥೆಯಿಂದ ಸಮಾಜ ಸೇವಾ ಕೆಲಸಗಳನ್ನು ನಿರ್ವಹಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸಮಾಜ ಸೇವಾ ಕಾರ್ಯಗಳ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡುವಂತೆ ಅಕಾರಿಗಳು ಸೂಚಿಸಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾದ ರಾಹುಲ್‍ಗಾಂ ಮಹತ್ವದ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಬುಧವಾರ, ಗುರುವಾರ ದೆಹಲಿಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ಸಂಸದರು ಸೇರಿ ಹಲವು ನಾಯಕರ ಮೇಲೆ ಬಲ ಪ್ರಯೋಗ ನಡೆಸಿದ್ದರು. ಇದರ ವಿರುದ್ಧ ಲೋಕಸಭೆಯ ಸ್ಪೀಕರ್ ಅವರಿಗೆ ದೂರು ನೀಡಿರುವ ಕಾಂಗ್ರೆಸ್, ಈಗ ರಾಷ್ಟ್ರಪತಿ ಅವರಿಗೆ ದೂರು ನೀಡಲು ಮುಂದಾಗಿದೆ.