Thursday, 26th December 2024

Rahul Gandhi: ಹಿರಿಯ ಸಂಸದರ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ವಿಪಕ್ಷ ನಾಯಕನಿಗೆ ತಿಳಿದಿಲ್ಲ: ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಕಿಡಿ

Rahul Gandhi

ನವದೆಹಲಿ: ಸಮಯಪಾಲನೆಯ ಸಲಹೆ ನೀಡಿದ ಕಾಂಗ್ರೆಸ್‌ನ ಹಿರಿಯ ಸಂಸದ ಸುಖ್‌ಜಿಂದರ್‌ ಸಿಂಗ್‌ ರಾಂಧವಾ (Sukhjinder Singh Randhawa) ಅವರ ಜೊತೆ ರಾಹುಲ್‌ ಗಾಂಧಿ (Rahul Gandhi) ಅಹಂಕಾರದಿಂದ ವರ್ತಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್‌ ಖಾತೆಯಲ್ಲಿ ಸಂವಾದದ ವಿಡಿಯೊವನ್ನು ಹಂಚಿಕೊಂಡು, ರಾಹುಲ್‌ ವರ್ತನೆಯು ಅಗೌರವದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.

ಮಾಳವಿಯಾ ಅವರು ಮಂಗಳವಾರ ಎಕ್ಸ್‌ನಲ್ಲಿ ಸಂವಾದದ ವಿಡಿಯೊವನ್ನು ಹಂಚಿಕೊಂಡಿದ್ದು, ಗುರುದಾಸ್‌ಪುರದ ಕಾಂಗ್ರೆಸ್ ಸಂಸದ ಸುಖಜಿಂದರ್ ಸಿಂಗ್ ರಾಂಧವಾ ಅವರು ರಾಹುಲ್‌ ಗಾಂಧಿಯ ಶಿಸ್ತಿನ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್‌ ಗಾಂಧಿ ದುರಹಂಕಾರದಿಂದ ವರ್ತಿಸಿದ್ದಾರೆ. ಪಂಜಾಬ್‌ನ ಹಿರಿಯ ಕಾಂಗ್ರೆಸ್ ಶಾಸಕರನ್ನು ಇಂತಹ ಅವಮಾನಕ್ಕೆ ಒಳಪಡಿಸುವುದು ಸರಿ ಅಲ್ಲ ಎಂದು ಮಾಳವಿಯಾ ಹೇಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಮಂಗಳವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಸಭೆಯ ನಂತರ ಗುರುದಾಸ್‌ಪುರ ಸಂಸದ ರಾಂಧವಾ ಹಾಗೂ ರಾಹುಲ್‌ ಗಾಂಧಿ ಅವರು ಸಮಯ ಪಾಲನೆಯ ಬಗ್ಗೆ ಲಘುವಾದ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಸಭೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ರಾಂಧವ ಅವರು ರಾಹುಲ್‌ ಗಾಂಧಿಗೆ ಸಲಹೆ ನೀಡುತ್ತಿದ್ದುದು ಕೇಳಿಬರುತ್ತಿದೆ. ಮೊದಲಿಗೆ ರಾಹುಲ್‌ ಗಾಂಧಿ “ನೀವು ಸಮಯಕ್ಕೆ ಸರಿಯಾಗಿ ಸಭೆಗೆ ಬರಬೇಕುʼʼ ಎಂದು ಸಲಹೆ ನೀಡಿದ್ದಾರೆ.

ಆಗ 65 ವರ್ಷದ ಸುಖ್‌ಜಿಂದರ್‌ ಸಿಂಗ್‌ ರಾಂಧವಾ ಮಾತನಾಡಿ, “ನಾನು ಸರಿಯಾದ ಸಮಯಕ್ಕೆ ಬಂದಿದ್ದೇನೆ. ನೀವು ತಡವಾಗಿ ಬಂದಿದ್ದೀರಿʼʼ ಎಂದು ಹೇಳಿದ್ದಾರೆ. ನಂತರ ಇಬ್ಬರೂ ನಾಯಕರು ನಕ್ಕಿದ್ದಾರೆ. ಈ ಘಟನೆಯಾದಾಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಇರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಈ ಸಭೆಗೂ ಮುನ್ನ ಕಾಂಗ್ರೆಸ್‌ ನೇತೃತ್ವದ ಮೈತ್ರಿ ಕೂಟ ಬಹುಕೋಟಿ ಹಗರಣದ ಲಂಚದ ಆರೋಪ ಎದುರಿಸುತ್ತಿರುವ ಉದ್ಯಮ ಗೌತಮ್‌ ಅದಾನಿ ಬಗ್ಗೆ ಚರ್ಚೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.

ಈ ಸುದ್ದಿಯನ್ನೂ ಓದಿ : Farmers Protest: ರೈತರಿಂದ ದೆಹಲಿ ಚಲೋ; ಭಾರೀ ಟ್ರಾಫಿಕ್‌ ಜಾಮ್‌, ಜನ ಹೈರಾಣ