ನವದೆಹಲಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ದ್ವೇಷ ಬೆಳೆಯುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ವಿಭಜಿಸುತ್ತಿವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದರು.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ನ ಮೆಗಾ ರ್‍ಯಾಲಿ ನಡೆಯುತ್ತಿದ್ದು, ವೇದಿಕೆಯಲ್ಲಿ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
“ಜನರು ಅವರ ಭವಿಷ್ಯ, ಹಣದುಬ್ಬರ ಮತ್ತು ನಿರುದ್ಯೋಗದಿಂದ ಭಯಭೀತರಾಗಿದ್ದಾರೆ. ಬಿಜೆಪಿ ಅವರನ್ನು ದ್ವೇಷದ ಕಡೆಗೆ ತಿರುಗಿಸುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶವನ್ನು ವಿಭಜಿಸುತ್ತಿವೆ” ಎಂದು ಹೇಳಿದರು.
“ಕೇವಲ ಇಬ್ಬರು ಉದ್ಯಮಿಗಳು ಸರ್ಕಾರದಿಂದ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ದೇಶದ ವಿಮಾನ ನಿಲ್ದಾಣ, ಬಂದರು, ರಸ್ತೆಗಳು ಎಲ್ಲವನ್ನೂ ಈ ಇಬ್ಬರು ವ್ಯಕ್ತಿಗಳು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
ದೇಶದ ಪ್ರಗತಿಯಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯಬೇಕು ಎಂದು ನಮ್ಮ ಸಿದ್ಧಾಂತ ಹೇಳುತ್ತದೆ. ಮೋದಿ ಸರ್ಕಾರವು ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಆಯ್ದ ಇಬ್ಬರು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರ ಲಾಭ ನೀಡುತ್ತಿದೆ” ಎಂದು ದೂರಿದರು.
“ಈ ರೀತಿಯ ಬೆಲೆ ಏರಿಕೆಯನ್ನು ದೇಶ ಹಿಂದೆಂದೂ ನೋಡಿಲ್ಲ. ಚೀನಾದೊಂದಿಗಿನ ಉದ್ವಿಗ್ನತೆ, ಹಣದುಬ್ಬರ ಅಥವಾ ನಿರುದ್ಯೋಗ ಆಗಿರಬಹುದು, ಸಂಸತ್ತಿನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲು ವಿಪಕ್ಷಗಳಿಗೆ ಅನುಮತಿ ನೀಡುವುದಿಲ್ಲ” ಎಂದು ಆರೋಪಿಸಿದರು.
ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುವ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಕ್ಷದ 3,500 ಕಿಮೀ ‘ಭಾರತ್ ಜೋಡೋ ಯಾತ್ರೆ’ಯೊಂದಿಗೆ ರಾಹುಲ್ ಗಾಂಧಿ ಬೀದಿಗಿಳಿಯಲು ಈ ರ್‍ಯಾಲಿ ವೇದಿಕೆಯನ್ನು ಸಿದ್ಧಪಡಿಸುತ್ತಿದೆ.