Friday, 22nd November 2024

ಲಂಡನ್ ನಲ್ಲಿ ರಾಹುಲ್ ಗಾಂಧಿ ಹೇಳಿಕೆ: ಮುಂದುವರೆದ ಟೀಕಾಪ್ರಹಾರ, ವಾಕ್ಸಮರ

ನವದೆಹಲಿ: ರಾಹುಲ್ ಗಾಂಧಿಯವರು ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಟೀಕಾಪ್ರಹಾರ, ವಾಕ್ಸಮರ ಸದನದಲ್ಲಿ ಮುಂದುವರಿಯುತ್ತಲೇ ಇದೆ.
ಶುಕ್ರವಾರ ಸಂಸತ್ತಿನಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ಗದ್ದಲದ ನಂತರ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು. ಸಂಸತ್ತು ಕಲಾಪ ಪುನಾರಂಭಗೊಂಡ 5ನೇ ದಿನವೂ ಕಲಾಪದಲ್ಲಿ ಯಾವುದೇ ಫಲಪ್ರದ ಮಾತುಕತೆ, ಚರ್ಚೆಗಳು ನಡೆಯದೆ ವ್ಯರ್ಥವಾಗಿ ಮುಂದೂಡಲಾಗಿದೆ. ಬಿಜೆಪಿ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡಲು ಸದನದಲ್ಲಿ ಸಮಯಾವಕಾಶ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದರು.
ಯುಕೆ ಪ್ರವಾಸದಿಂದ ವಾಪಸಾದ ನಂತರ ಇಂದು ಸಂಸತ್ ಭವನಕ್ಕೆ ಆಗಮಿಸಿದ ರಾಹುಲ್ ಗಾಂಧಿ ಲಂಡನ್ನಲ್ಲಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸು ತ್ತೀರಾ ಎಂದು ಕೇಳಿದಾಗ ಮುಗುಳ್ನಕ್ಕು ಸುಮ್ಮನಾಗಿದ್ದರು.

ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಕೋಲಾಹಲ ಸೃಷ್ಟಿಸಿದ್ದರಿಂದ ಇಂದು ಶುಕ್ರವಾರ ಸಂಸತ್ತು ಕಲಾಪದಲ್ಲಿ ಸದನ ಸೇರಿದ ಕೆಲವೇ ನಿಮಿಷಗಳಲ್ಲಿ ರಾಜ್ಯಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.