ಜೈಪುರ: ಹೊಸ ವರ್ಷದ ಮೊದಲ ದಿನದಂದೇ ದೇಶ ಮತ್ತೊಂದು ಕೊಳವೆ ಬಾವಿ ದುರಂತಕ್ಕೆ ಸಾಕ್ಷಿಯಾಗಿದೆ. 10 ದಿನಗಳ ಹಿಂದೆ ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗುವನ್ನು ಹೊರ ಕರೆತರಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದೆ. ಡಿ. 23ರಂದು 3ರ ಹರೆಯದ ಚೇತನಾ ಆಟವಾಡುತ್ತಾ 700 ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದುಬಿಟ್ಟಿದ್ದಳು. ಸತತ ಕಾರ್ಯಾಚರಣೆಯ ಮೂಲಕ ಆಕೆಯನ್ನು ಬುಧವಾರ (ಜ. 1)ಮೇಲಕ್ಕೆತ್ತಲಾಯಿತು. ಬಳಿಕ ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಆಕೆಯ ಪ್ರಾಣ ಹೊರಟು ಹೋಗಿತ್ತು ಎಂದು ಮೂಲಗಳು ತಿಳಿಸಿವೆ (Rajasthan Borewell Tragedy).
ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಚೇತನ್ಯ ರಾವತ್ ಈ ಬಗ್ಗೆ ಮಾಹಿತಿ ನೀಡಿ, ʼʼಕೊಳವೆ ಬಾವಿಯಿಂದ ಮೇಲಕ್ಕೆತ್ತಿದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆ ತರಲಾಯಿತು. ಚಿಕಿತ್ಸೆಗಾಗಿ ವಿಶೇಷವಾಗಿ ಸಜ್ಜುಗೊಳಿಸಿದ್ದ ಬೆಡ್ ಮೇಲೆ ಮಲಗಿಸಿ ಆಕೆಯನ್ನು ಪರೀಕ್ಷಿಸಿದಾಗ ಅದಾಗಲೆ ಮೃತಪಟ್ಟಿರುವುದು ತಿಳಿದು ಬಂತು. ಪೋಸ್ಟ್ ಮಾರ್ಟಂಗಾಗಿ ಆಕೆಯ ಮೃತದೇಹವನ್ನು ಕಳುಹಿಸಿದ್ದೇವೆʼʼ ಎಂದು ತಿಳಿಸಿದರು. ಆಕೆಯ ಪಾಲಕ ಆಕ್ರಂದನ ಮುಗಿಲು ಮುಟ್ಟಿದೆ.
#WATCH | Kotputli, Rajasthan: On operations to rescue a 3-year-old girl who fell into a borewell in Kiratpura village on December 23, Principal Medical Officer Chaitanya Rawat says, "… A team of three doctors examined the girl. The body has been shifted to the mortuary. Her… pic.twitter.com/Ikh3aidvoQ
— ANI (@ANI) January 1, 2025
ಜಮೀನಿನಲ್ಲಿ ಆಟವಾಡುತ್ತಿದ್ದ ಚೇತನಾ ಡಿ. 23ರ ಅಪರಾಹ್ನ 700 ಅಡಿಯ ಆಳದ ಕೊಳವೆ ಬಾವಿಗೆ ಬಿದ್ದು ಬಿಟ್ಟಿದ್ದಳು. ವಿಷಯ ತಿಳಿದ ಜಿಲ್ಲಾಡಳಿತ ಆಕೆಯ ರಕ್ಷಣೆಗೆ ಧಾವಿಸಿತ್ತು. ಸ್ಥಳಕ್ಕೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳು ಆಗಮಿಸಿದ್ದವು. ಆಮ್ಲಜನಕ, ಆಹಾರ ಪೂರೈಸಿ ಕಳೆದ 10 ದಿನಗಳಿಂದ ಬಾಲಕಿಯ ರಕ್ಷಣೆಗೆ ಸತ ಪ್ರಯತ್ನ ನಡೆದಿದ್ದವು.
ನಿರ್ದಿಷ್ಟ ಆಳದ ನಂತರ ಕೊಳವೆ ಬಾವಿಯನ್ನು ಇನ್ನೊಂದು ದಿಕ್ಕಿನಲ್ಲಿ ಕೊರೆದಿದ್ದು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ ಎಂದು ಜಿಲ್ಲಾಧಿಕಾರಿ ಕಲ್ಪನಾ ಅಗರ್ವಾಲ್ ವಿವರಿಸಿದ್ದರು. ಅಂತಿಮವಾಗಿ ರಕ್ಷಣಾ ತಂಡಗಳಿಗೆ ನೆರವಾಗಲು ದಿಲ್ಲಿ ಮತ್ತು ಜೈಪುರ ಮೆಟ್ರೋದ ತಜ್ಞರನ್ನು ಕರೆಸಲಾಯಿತು. ತೀವ್ರ ಚಳಿಯ ನಡುವೆಯೂ ತಮ್ಮ ಮೊಮ್ಮಗಳನ್ನು ಉಳಿಸಲು ಶ್ರಮಿಸಿದ ತಂಡಕ್ಕೆ ಚೇತನಾಳ ಅಜ್ಜ ಧನ್ಯವಾದ ತಿಳಿಸಿದ್ದಾರೆ. ಜತೆಗೆ ನಿಷ್ಕ್ರೀಯ ಕೊಳವೆ ಬಾವಿಗಳ ಬಾಯಿಯನ್ನು ಮುಚ್ಚುವಂತೆ ಮನವಿ ಮಾಡಿದ್ದಾರೆ.
ತಿಂಗಳ ಅಂತರದಲ್ಲಿ 2ನೇ ದುರಂತ
1 ತಿಂಗಳ ಅಂತರದಲ್ಲಿ ರಾಜಸ್ಥಾನದಲ್ಲಿ ನಡೆಯುತ್ತಿರುವ 2ನೇ ಕೊಳವೆ ಬಾವಿ ದುರಂತವಿದು. ಡಿ. 12ರಂದು ರಾಜಸ್ಥಾನದ ದೌಸಾದ ಕಲಿಖಂಡ್ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದ 5 ವರ್ಷದ ಬಾಲಕ ಆರ್ಯನ್ ಮೃತಪಟ್ಟಿದ್ದ. ನಿರಂತರ 57 ಗಂಟೆಗಳ ಕಾರ್ಯಾಚರಣೆ ಫಲ ನೀಡಿರಲಿಲ್ಲ. ಬಾಲಕ ಬಿದ್ದಿರುವ ಈ ಕೊಳವೆ ಬಾವಿಯ ಪಕ್ಕದಲ್ಲೇ ಸಮಾನಾಂತರಾವಾಗಿ ಹೊಂಡ ತೆಗೆಯಲು ಜೆಸಿಬಿ ಯಂತ್ರಗಳನ್ನು ಹಾಗು ಟ್ರ್ಯಾಕ್ಟರ್‌ಗಳನ್ನು ನಿಯೋಜಿಸಲಾಗಿತ್ತು. ಇನ್ನೊಂದೆಡೆ ಹಗ್ಗ ಮತ್ತು ಇನ್ನಿತರ ಸಲಕರಣೆಗಳ ಮೂಲಕ ಬಾಲಕನನ್ನು ರಕ್ಷಿಸುವ ಕೆಲಸವನ್ನೂ ಪ್ರಾರಂಭಿಸಲಾಗಿತ್ತು. ಆದರೆ ಬಾಲಕನನ್ನು ಜೀವಂತವಾಗಿ ಮೇಲೆತ್ತಲು ಸಾಧ್ಯವಾಗಿರಲಿಲ್ಲ.
ಈ ಸುದ್ದಿಯನ್ನೂ ಓದಿ: Rajasthan Borewell tragedy : ಫಲಿಸಲಿಲ್ಲ ಪ್ರಾರ್ಥನೆ- ಬದುಕುಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ ಪುಟ್ಟ ಕಂದಮ್ಮ