Thursday, 12th December 2024

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಕೋವಿಡ್ ಸೋಂಕಿಗೆ ಬಲಿ

ಜೈಪುರ್: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಜಗನ್ನಾಥ್ ಪಹಾಡಿಯಾ(89ವರ್ಷ) ಕೋವಿಡ್  ಸೋಂಕಿನಿಂದ ನಿಧನರಾದರು.

1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ಪಹಾಡಿಯಾ ಅವರು ಹರ್ಯಾಣ ಮತ್ತು ಬಿಹಾರದ ಮಾಜಿ ರಾಜ್ಯಪಾಲ ರಾಗಿ ಕಾರ್ಯನಿರ್ವಹಿಸಿದ್ದರು. ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಅವರ ಪತ್ನಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪಹಾಡಿಯಾ ಅವರ ನಿಧನ ತಮಗೆ ಆಘಾತ ತಂದಿರುವುದಾಗಿ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಆರಂಭದಿಂದಲೂ ನನಗೆ ಅವರು ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರು. ಅವರ ನಿಧನದಿಂದ ತನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟ ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ. ಸರ್ಕಾರಿ ಕಚೇರಿಗಳಿಗೂ ರಜೆ ಘೋಷಿಸಿದೆ.