ಜೈಪುರ (ರಾಜಸ್ಥಾನ): ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇ.40.27ರಷ್ಟು ಮತದಾನವಾಗಿದೆ.
ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ದಾರ್ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಕುಟುಂಬದೊಂದಿಗೆ ಮಹಾಮಂದಿರದಲ್ಲಿನ ವರ್ಧಮಾನ್ ಜೈನ ವಿದ್ಯಾಲಯದ ಬೂತ್ ಸಂಖ್ಯೆ 111ರಲ್ಲಿ ಮತ ಚಲಾಯಿಸಿದರು.
ಮಾಜಿ ಸಿಎಂ ವಸುಂಧರಾ ರಾಜೆ ಅವರು, ಜಲಾವರ್ ನಗರದ ಹೌಸಿಂಗ್ ಬೋರ್ಡ್ ಸಮುದಾಯ ಭವನದಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 32ರಲ್ಲಿ ಮತ ಚಲಾಯಿಸಿದರು. ಕೋಟಾದಲ್ಲಿ ಲೋಕಸಭಾ ಸ್ಪೀಕರ್ ಮತದಾನ ಮಾಡಿದರು. ಜೋಧ್ಪುರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ ಚಲಾಯಿಸಿದರೆ, ಅಸ್ಸೋಂ ರಾಜ್ಯಪಾಲ ಗುಲಾಬ್ಚಂದ್ ಕಟಾರಿಯಾ ಅವರು ರಾಜಸ್ಥಾನ ಹೌಸಿಂಗ್ ಬೋರ್ಡ್ ಕಚೇರಿ ಹಿರಾನ್ ಮ್ಯಾಗ್ರಿಯಲ್ಲಿ ರುವ ಬೂತ್ ಸಂಖ್ಯೆ 107ರಲ್ಲಿ ಮತ ಚಲಾಯಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಗುರ್ಮೀತ್ ಸಿಂಗ್ ಕೂನಾರ್ ನಿಧನದ ಹಿನ್ನೆಲೆಯಲ್ಲಿ ಕರಣಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.
199 ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ 25, ಪರಿಶಿಷ್ಟ ಪಂಗಡಕ್ಕೆ 34 ಮತ್ತು ಸಾಮಾನ್ಯ ವರ್ಗಕ್ಕೆ 144 ಸ್ಥಾನಗಳನ್ನು ಮೀಸಲಿಡಲಾಗಿದೆ. ಅಸ್ತಿತ್ವದಲ್ಲಿರುವ ರಾಜಸ್ಥಾನ ವಿಧಾನಸಭೆಯ ಅವಧಿಯು ಜನವರಿ 14, 2024 ರಂದು ಮುಕ್ತಾಯಗೊಳ್ಳಲಿದೆ.