ಮುಂಬೈ: ಬಹು ಬೇಡಿಕೆಯ ಮತ್ತು ಪುಷ್ಪಾ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ಸದ್ಯ ಸಲ್ಮಾನ್ ಖಾನ್(Salman Khan) ಜೊತೆಗಿನ ತಮ್ಮ ಬಹು ನಿರೀಕ್ಷಿತ ಸಿನಿಮಾ ಸಿಕಂದರ್(Sikandar) ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಚಿತ್ರೀಕರಣದ ವೇಳೆ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಿಶ್ರಾಂತಿ ಪಡೆಯಲು ವೈದ್ಯರು ತಿಳಿಸಿದ್ದಾರೆ. “ರಶ್ಮಿಕಾ ಇತ್ತೀಚೆಗೆ ಜಿಮ್ನಲ್ಲಿ ಗಾಯಗೊಂಡಿದ್ದಾರೆ ಮತ್ತು ವಿಶ್ರಾಂತಿ ಪಡೆಯುವ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ. ಸಿಕಂದರ್ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಶೀಘ್ರದಲ್ಲೇ ಅವರು ಶೂಟಿಂಗ್ನಲ್ಲಿ ಪಾಲ್ಗೊಳಲ್ಲಿದ್ದಾರೆ” ಎಂದು ನಟಿಯ ಆಪ್ತ ಮೂಲಗಳಿಂದ ಮಾಹಿತಿ ದೊರೆತಿದೆ.
ಡಿಸೆಂಬರ್ 28 ರಂದು, ಸಲ್ಮಾನ್ ಅವರ 59 ನೇ ಹುಟ್ಟುಹಬ್ಬದ ಒಂದು ಪ್ರಯುಕ್ತ ಸಿಕಂದರ್ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಟೀಸರ್ ಅನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟ ಸಲ್ಮಾನ್ “ಜನ್ಮದಿನದ ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು.. ನಿಮ್ಮೆಲ್ಲರ ಪ್ರೀತಿಗೆ ಕೃತಜ್ಞನಾಗಿದ್ದೇನೆ. ಸಿಕಂದರ್ ಟೀಸರ್ ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇವೆ….” ಎಂದು ಬರೆದಿದ್ದರು.
ಎ.ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿಕಂದರ್ ಸಿನಿಮಾವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದಾರೆ. ಸಿಕಂದರ್ ಈ ವರ್ಷ ತೆರೆಕಾಣಲಿದೆ. ಕಾಜಲ್ ಅಗರ್ವಾಲ್, ಸತ್ಯರಾಜ್, ಅನಂತ್ ಮಹದೇವನ್, ಶರ್ಮನ್ ಜೋಶಿ, ಪ್ರತೀಕ್ ಬಬ್ಬರ್, ನವಾಬ್ ಶಾ ಮತ್ತು ಅಂಜಿನಿ ಧವನ್ ತಾರಾಗಣದಲ್ಲಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅಪಘಾತವಾಗಿತ್ತು. ಆ ಕುರಿತು ಸ್ವತಃ ರಶ್ಮಿಕಾ ಮಾಹಿತಿಯನ್ನು ಹಂಚಿಕೊಂಡಿದ್ದರು. ಕೆಲ ತಿಂಗಳುಗಳು ಸೋಶಿಯಲ್ ಮೀಡಿಯಾದಲ್ಲಿ ಸೈಲೆಂಟ್ ಆಗಿದ್ದ ನಟಿ ಸೆಪ್ಟಂಬರ್ ತಿಂಗಳಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಪೋಟೊವೊಂದನ್ನು ಶೇರ್ ಮಾಡಿಕೊಂಡಿದ್ದ ರಶ್ಮಿಕಾ ‘ಸಣ್ಣ ಅಪಘಾತವಾಗಿದೆ’ ಎಂದು ಹೇಳಿಕೊಂಡಿದ್ದರು.
‘ನಿಮ್ಮೆದುರು ಕಾಣಿಸಿಕೊಳ್ಳದೆ ಹಲವು ದಿನಗಳಾಗಿವೆ ಎಂದು ತಿಳಿದಿದೆ. ನನಗೆ ಸಣ್ಣ ಅಪಘಾತ ಸಂಭವಿಸಿದೆ. ಈಗ ಚೇತರಿಸಿಕೊಂಡಿದ್ದೇನೆ. ವೈದ್ಯರು ಹೇಳಿದಂತೆ ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ತಲೆ ಎತ್ತಲು ಹಾಗೂ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತಿದೆ. ನಿಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳಿ. ಯಾಕೆಂದರೆ ಜೀವನ ಚಿಕ್ಕದಾಗಿದೆ. ನಮಗೆ ನಾಳೆ ಎನ್ನುವುದು ಇದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಹೀಗಾಗಿ ಪ್ರತಿದಿನ ಸಂತೋಷದಿಂದಿರಿ’ ಎಂದು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ರಶ್ಮಿಕಾ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಬೇಗನೆ ಚೇತರಿಸಿಕೊಳ್ಳುವಂತೆ ಹಾರೈಸಿದ್ದರು.
ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್