ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಹಾಗೂ ಭಾರತ ದೇಶ ಕಂಡ ಅದ್ವಿತೀಯ ಉದ್ಯಮಿ ರತನ್ ನಾವಲ್ ಟಾಟಾ (Ratan Tata) ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ ಇವರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ, ಮೊನ್ನೆಯಷ್ಟೇ ರಕ್ತದೊತ್ತಡ ಹೆಚ್ಚಾಗಿ ಮುಂಬೈನ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ರತನ್ ಟಾಟಾ ಕೈ ಹಾಕದ ಉದ್ಯಮವೇ ಇರಲಿಲ್ಲ. ವಿಮಾನ ಉದ್ಯಮ, ಆಟೋಮೋಟಿವ್, ಪವರ್, ಸ್ಟೀಲ್, ಹೋಟೆಲ್‌ಗಳು, ಐಟಿ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಲ್ಲೂ ಯಶಸ್ಸು ಕಂಡಿದ್ದರು.
ಸಿನಿಮಾ ಕ್ಷೇತ್ರದಲ್ಲೂ ಇವರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಆದರೆ, ಇದರಲ್ಲಿ ಮಾತ್ರ ಯಶಸ್ಸು ಸಾಧಿಸಲಿಲ್ಲ. ರತನ್ ಟಾಟಾ ಒಂದೇ ಒಂದು ಸಿನಿಮಾಗೆ ಬಂಡವಾಳ ಹೂಡಿದ್ದರು. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಅಂದಿನಿಂದ ಮತ್ತೆ ಸಿನಿಮಾ ನಿರ್ಮಾಣದ ಕಡೆಗೆ ಮುಖವೇ ಹಾಕಲಿಲ್ಲ.
ರತನ್ ಟಾಟಾ ಬಂಡವಾಳ ಹೂಡಿಕೆ ಮಾಡಿ ನಿರ್ಮಿಸಿದ್ದ ಚಿತ್ರ ಭಾರತದ ಅತಿದೊಡ್ಡ ಫ್ಲಾಪ್ ಸಿನಿಮಾಗಳಲ್ಲಿ ಒಂದಾಗಿದೆ. ಐತ್‌ಬಾರ್ ರತನ್ ಟಾಟಾ ನಿರ್ಮಿಸಿದ ಬಾಲಿವುಡ್ ಸಿನಿಮಾ. 2004ರಲ್ಲಿ ಬಿಡುಗಡೆಯಾಗಿದ್ದ ಈ ರೊಮ್ಯಾಂಟಿಕ್ ಸೈಕಾಲಿಜಿಕಲ್ ಥ್ರಿಲ್ಲರ್ ಕಥೆ ಹೊಂದಿದ್ದ ಸಿನಿಮಾವನ್ನು ನಿರ್ದೇಶಕ ವಿಕ್ರಮ್ ಭಟ್ ಆಕ್ಷನ್ ಕಟ್ ಹೇಳಿದ್ದರು. ಟಾಟಾ ಇನ್ಫೋಮೀಡಿಯಾ ಬ್ಯಾನರ್ ಅಡಿಯಲ್ಲಿ ಐತ್‌ಬಾರ್ ಸಿನಿಮಾ ನಿರ್ಮಾಣವಾಗಿತ್ತು.
ಅತಿದೊಡ್ಡ ಬಜೆಟ್ ಹೊಂದಿದ್ದರೂ ಸಿನಿಮಾ ಪ್ರೇಕ್ಷಕರನ್ನು ತಲುಪವಲ್ಲಿ ಯಶಸ್ವಿಯಾಗಲಿಲ್ಲ. ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್, ಬಿಪಾಶ ಬಸು ಮತ್ತು ಜಾನ್ ಅಬ್ರಾಹಂ ಲೀಡ್ ರೋಲ್‌ನಲ್ಲಿ ನಟಿಸಿದ್ದರು. 1996ರಲ್ಲಿ ಬಿಡುಗಡೆಯಾಗಿದ್ದ ಅಮೆರಿಕನ್ ಸಿನಿಮಾದ “ಫಿಯರ್” ಕಥೆಯಿಂದ ಸ್ಪೂರ್ತಿ ಪಡೆದ ಸಿನಿಮಾ ಇದಾಗಿದೆ. ಸೈಕೋಪಾತಿಕ್ ಲವರ್‌ನಿಂದ ಮಗಳನ್ನು ತಂದೆ ರಕ್ಷಿಸುವುದು ಸಿನಿಮಾದ ಒನ್ ಲೈನ್ ಸ್ಟೋರಿ. ಡಾ. ರಣ್‌ವೀರ್ ಮಲ್ಹೋತ್ರಾ ಪಾತ್ರದಲ್ಲಿ ಅಮಿತಾಬ್ ಬಚ್ಚನ್, ಮಗಳು ರಿಯಾ ಮಲ್ಹೋತ್ರಾಳಾಗಿ ಬಿಪಾಶಾ ಬಸು ಮತ್ತು ಸೈಕೋ ಲವರ್‌ನಾಗಿ ಜಾನ್ ಅಬ್ರಾಹಂ ನಟಿಸಿದ್ದರು.
ಬಾಲಿವುಡ್‌ನ ನಿರ್ಮಾಪಕ ಜಿತಿನ್ ಕುಮಾರ್ ಎಂಬುವವರೊಂದಿಗೆ ಸೇರಿ ರತನ್ ಟಾಟಾ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಆಗಿನ ಕಾಲಕ್ಕೆ ಈ ಸಿನಿಮಾದ ಬಜೆಟ್ 9.50 ಕೋಟಿ ರೂಪಾಯಿ ದಾಟಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡಿದ್ದು 7.96 ಕೋಟಿಯಷ್ಟೆ. ಈ ಸಿನಿಮಾ ಹೀನಾಯ ಸೋಲು ಅನುಭವಿಸಿದ ಬಳಿಕ ರತನ್ ಟಾಟಾ ಯಾವುದೇ ಸಿನಿಮಾ ನಿರ್ಮಾಣದ ಕೆಲಸಕ್ಕೆ ಕೈ ಹಾಕಲಿಲ್ಲ.
Ratan Tata Death: ನಾಲ್ವರ ಜೊತೆ ಪ್ರಣಯ, ಮದುವೆಯಾಗಲು ಭಯ! ಇದು ರತನ್ ಟಾಟಾ ಖಾಸಗಿ ಕಥೆ