Thursday, 19th December 2024

RBI Monetary Policy Meeting: ಬಡ್ಡಿದರ ಇಳಿಕೆಯಾಗುತ್ತಾ? ಕೆಲವೇ ಕ್ಷಣಗಳಲ್ಲಿ ಆರ್‌ಬಿಐನಿಂದ ಮಹತ್ವದ ನಿರ್ಧಾರ ಪ್ರಕಟ

RBI Monetary Policy Meeting

ಹೊಸದಿಲ್ಲಿ: 3 ದಿನಗಳ ಹಣಕಾಸು ನೀತಿ ಸಭೆಯ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂದು (ಡಿ. 6) ತನ್ನ ಬಡ್ಡಿದರ ನಿರ್ಧಾರವನ್ನು ಪ್ರಕಟಿಸಲಿದೆ. ಹೆಚ್ಚಿನ ಹಣದುಬ್ಬರ ಮತ್ತು ನಿಧಾನಗತಿಯ ಜಿಡಿಪಿ ಬೆಳವಣಿಗೆಯ ಮಧ್ಯೆ, ತಜ್ಞರ ಪ್ರಕಾರ, ಆರ್‌ಬಿಐ ರೆಪೋ ದರವನ್ನು ಅದೇ ರೀತಿ ಉಳಿಸಿಕೊಳ್ಳಲಿದೆ. ಆದರೆ ನಗದು ಮೀಸಲು ಅನುಪಾತವನ್ನು (Cash Reserve Ratio) ಸರಿ ಹೊಂದಿಸುವ ಸಾಧ್ಯತೆ ಇದೆ (RBI Monetary Policy Meeting).

”ಡಿ. 6ರ 10 ಗಂಟೆಗೆ ಮಾನಿಟರಿ ಪಾಲಿಸಿ ಕಮಿಟಿ (Monetary Policy Committee)ಯ ನಿರ್ಧಾರವನ್ನು ಗವರ್ನರ್‌ ಶಕ್ತಿಕಾಂತ ದಾಸ್ ಪ್ರಕಟಿಸಲಿದ್ದಾರೆʼʼ ಎಂದು ಆರ್‌ಬಿಐ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ್ದಾರೆ.

6 ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ (MPC)ಯ ನೇತೃತ್ವ ವಹಿಸಿರುವ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಮುಂದಿನ ದ್ವೈಮಾಸಿಕ ಹಣಕಾಸು ನೀತಿಯನ್ನು ನಿರ್ಧರಿಸಲು ಸಭೆಯನ್ನು ಡಿ. 4ರಂದು ಆರಂಭಿಸಿದ್ದರು. ಶಕ್ತಿಕಾಂತ ದಾಸ್ ಅವರ ಪ್ರಸ್ತುತ ಅವಧಿಯ ಕೊನೆಯ ಎಂಪಿಸಿ ಸಭೆ ಡಿ. 10ರಂದು ಕೊನೆಗೊ‍ಳ್ಳಲಿದೆ.

ಪ್ರಸ್ತುತ ರೆಪೋ ರೇಟ್‌ ಎಷ್ಟಿದೆ?

ಪ್ರಸ್ತುತ ರೆಪೋ ದರ ಅಥವಾ ಬಡ್ಡಿದರ ಶೇ. 6.5ರಷ್ಟಿದೆ. ಕಳೆದ ಒಂದೂವರೆ ವರ್ಷದಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂದರೆ ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು. ಬಡ್ಡಿದರ ಇಳಿಸಿದರೆ ಹಣದುಬ್ಬರ ಇನ್ನಷ್ಟು ನಿಯಂತ್ರಣ ಕಳೆದುಕೊಂಡು ಏರಿಬಿಡಬಹುದು ಎನ್ನುವ ಭಯ ಇರುವುದರಿಂದ ಇದರಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.

ಸಭೆಯಲ್ಲಿ ಏನೆಲ್ಲ ಆಗಲಿದೆ?

  • ಆರ್ಥಿಕ ಬೆಳವಣಿಗೆಯು 7 ತ್ರೈಮಾಸಿಕದ ಕನಿಷ್ಠ ಮಟ್ಟಕ್ಕೆ ಇಳಿದ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗಳ ನಗದು ಮೀಸಲು ಅನುಪಾತಗಳನ್ನು ಕಡಿಮೆ ಮಾಡುವ ಮೂಲಕ ವಿತ್ತೀಯ ಪರಿಸ್ಥಿತಿಗಳನ್ನು ಸರಾಗಗೊಳಿಸಬಹುದು. ಹಣದುಬ್ಬರದ ಒತ್ತಡದ ಕಾರಣ ಬಡ್ಡಿದರಗಳನ್ನು ಕಡಿತಗೊಳಿಸುವ ಸಾಧ್ಯತೆ ಕಡಿಮೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
  • ಸಿಆರ್‌ಆರ್‌ ಕಡಿತವು ರೆಪೋ ದರದ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ ಆರ್ಥಿಕ ಚಟುವಟಿಕೆಗೆ ಅನುಕೂಲವನ್ನು ಒದಗಿಸಲಿದೆ. 2024ರ ಡಿಸೆಂಬರ್ ಮತ್ತು 2025ರ ನಡುವೆ, ಸಿಆರ್‌ಆರ್‌ನಲ್ಲಿ 50 ಬಿಪಿಎಸ್ ಕಡಿತವಾಗುವ ಸಾಧ್ಯತೆಯಿದೆ. ಅಂದರೆ ಶೇ. 4.5ರಿಂದ ಶೇ. 4ಕ್ಕೆ ಇಳಿಯಲಿದೆ.
  • ಸಿಆರ್‌ಆರ್‌ ಎಂದರೆ ಬ್ಯಾಂಕ್‌ಗಳು ನಗದು ರೂಪದಲ್ಲಿ ಮೀಸಲಿಡಬೇಕಾದ ಠೇವಣಿಗಳ ಪ್ರಮಾಣ. ಇದನ್ನು 50 ಬೇಸಿಸ್ ಪಾಯಿಂಟ್‌ ಕಡಿಮೆ ಮಾಡುವುದರಿಂದ ಮಾರುಕಟ್ಟೆ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ.
  • ಆರ್‌ಬಿಐ ಬಡ್ಡಿದರಗಳನ್ನು ಕಡಿತಗೊಳಿಸಿದರೆ 2020ರ ಮೇಯ ನಂತರ ಮೊದಲ ಬಾರಿಗೆ ಇಳಿದಂತಾಗುತ್ತದೆ.
  • ಆರ್​ಬಿಐಗೆ ಹಣದುಬ್ಬರವನ್ನು ಶೇ. 4ಕ್ಕೆ ತರುವುದು ಮುಖ್ಯ ಗುರಿಯಾಗಿದೆ. ಕೆಲ ತಿಂಗಳು ಹಣದುಬ್ಬರ ಶೇ. 5ರ ಒಳಗೆ ಬಂದಿತ್ತಾದರೂ, ಸದ್ಯ ಅಕ್ಟೋಬರ್​ನಲ್ಲಿ ಅದು ಶೇ. 6.21ಕ್ಕೆ ಏರಿದೆ.

ಈ ಸುದ್ದಿಯನ್ನೂ ಓದಿ: Market outlook: ಜಿಡಿಪಿ ಡೇಟಾಕ್ಕೆ ನಿಫ್ಟಿ ತಟವಟ? ಆರ್‌ಬಿಐ ಮೀಟಿಂಗ್‌ ಮೇಲೆ ಕಣ್ಣು