ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರೀಕ್ಷೆಯಂತೆ ರೆಪೋ ದರ (Repo Rate) ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿಯೇ ಮುಂದುವರಿಸಲು ನಿರ್ಧರಿಸಿದೆ. ರೆಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬ ಮಾನಿಟರಿ ಪಾಲಿಸಿ ಕಮಿಟಿ (Monetary Policy Committee)ಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ತಿಳಿಸಿದ್ದಾರೆ. ಇದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ (RBI MPC Meet October 2024).
ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ ಅಕ್ಟೋಬರ್ 7ರಂದು ಆರಂಭವಾಗಿತ್ತು. 3 ದಿನ ನಡೆದ ಈ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
#WATCH | Mumbai | RBI Governor Shaktikanta Das says, "…The Monetary Policy Committee decided by a majority to keep the policy repo rate unchanged at 6.5%…"
— ANI (@ANI) October 9, 2024
(Source – RBI/YouTube) pic.twitter.com/8qExz9HMEW
ಕಳೆದ ಒಂದೂವರೆ ವರ್ಷದಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂದರೆ ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು. ಹಿಂದಿನ 9 ಸಭೆಗಳಲ್ಲಿಯೂ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಬಾರಿಯೂ ಅದನ್ನೇ ಮುಂದುವರಿಸಲಾಗಿದೆ. ಡಿಸೆಂಬರ್ನಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ಬಡ್ಡಿದರ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಹಣದುಬ್ಬರ ನಿಯಂತ್ರಣದ ಗುರಿ
ಹಣದುಬ್ಬರವನ್ನು ನಿಯಂತ್ರಿಸುವುದೇ ಆರ್‌ಬಿಐಯ ಪ್ರಮುಖ ಗುರಿ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಆರ್‌ಬಿಐಯ ಅಭಿಮತ. ಶಕ್ತಿಕಾಂತ ದಾಸ್ ಅವರ ಪ್ರಕಾರ ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4ರಿಂದ 5ರ ವ್ಯಾಪ್ತಿಯಲ್ಲಿ ಇರಲಿದೆ. 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.5ರಷ್ಟು ಇರಲಿದೆ.
ರೆಪೋ ದರ ಎಂದರೇನು?
ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಅಂದರೆ ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದುವೇ ರೆಪೋ ರೇಟ್. ಕೆಲವೊಮ್ಮೆ ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.
ಆರ್‌ಬಿಐಯ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಒಟ್ಟು ಆರು ಸದಸ್ಯರಿರುತ್ತಾರೆ. ಈ ತಿಂಗಳ ಆರಂಭದಲ್ಲಿ ರಾಮ್ ಸಿಂಗ್, ಸೌಗತ ಭಟ್ಟಾಚಾರ್ಯ ಮತ್ತು ನಾಗೇಶ್ ಕುಮಾರ್ ಅವರನ್ನು ಹೊಸ ಸದಸ್ಯರನ್ನಾಗಿ ಸರ್ಕಾರ ನೇಮಿಸಿತ್ತು. ಇವರು ಆರ್‌ಬಿಐ ಗವರ್ನರ್ ಶಕ್ತಿಕಾಂತದಾಸ್, ಡೆಪ್ಯುಟಿ ಗವರ್ನರ್ ಮೈಕೇಲ್ ದೇವವ್ರತಾ ಪಾತ್ರ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಜೀವ್ ರಂಜನ್ ಅವರೊಂದಿಗೆ ಸೇರಿ ತೀರ್ಮಾನ ಕೈಗೊಳ್ಳುತ್ತಾರೆ.
ಈ ಸುದ್ದಿಯನ್ನೂ ಓದಿ: Unified Pension Scheme: ಏಕೀಕೃತ ಪಿಂಚಣಿ ಯೋಜನೆಯ ಅಧಿಸೂಚನೆ ಶೀಘ್ರದಲ್ಲೇ ಪ್ರಕಟ