Thursday, 5th December 2024

Rishab Shetty: ʼಛತ್ರಪತಿ ಶಿವಾಜಿʼ ಆಗಿ ಅಬ್ಬರಿಸಲಿರುವ ರಿಷಬ್‌ ಶೆಟ್ಟಿ, ಪೋಸ್ಟರ್‌ ರಿಲೀಸ್‌

rishabh shetty shivaji

ಬೆಂಗಳೂರು: ಪ್ಯಾನ್‌ ಇಂಡಿಯಾ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಅವರು ಇದೀಗ ಬಾಲಿವುಡ್‌ ಫಿಲಂನಲ್ಲೂ ಮಿಂಚಲಿದ್ದಾರೆ. ಛತ್ರಪತಿ ಶಿವಾಜಿಯ (Chatrapati Shivaji) ಪಾತ್ರದಲ್ಲಿ ಅವರು ಮಿಂಚಲಿದ್ದು, ಬಾಲಿವುಡ್‌ ನಿರ್ದೇಶಕ ಸಂದೀಪ್‌ ಶೆಟ್ಟಿ ಇದನ್ನು ನಿರ್ದೇಶಿಸುತ್ತಿದ್ದಾರೆ.

‘ಕಾಂತಾರ’ (Kantara) ಸಿನಿಮಾದಿಂದ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಹೊಮ್ಮಿದ ರಿಷಬ್ ಶೆಟ್ಟಿ ಅವರನ್ನು ಹಲವು ಭಾಷೆಯ ಚಿತ್ರೋದ್ಯಮಗಳು ಕೈಬೀಸಿ ಕರೆಯುತ್ತಿವೆ. ಆದರೆ ʼಕಾಂತಾರ- ಚಾಪ್ಟರ್ 1′ ಶೂಟಿಂಗ್‌ನಲ್ಲಿ ಅವರೀಗ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಛತ್ರಪತಿ ಶಿವಾಜಿಯಾಗುವ ಬಾಲಿವುಡ್‌ ಆಫರ್‌ ಅನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಪೋಸ್ಟರ್‌ ಬಿಡುಗಡೆ ಆಗಿದ್ದು, ಅದರಲ್ಲಿ ಶಿವಾಜಿಯಾಗಿ ರಿಷಬ್‌ ಮಿಂಚಿದ್ದಾರೆ.

ಈಗಾಗಲೇ ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಐತಿಹಾಸಿಕ ವ್ಯಕ್ತಿಯ ಕತೆಯುಳ್ಳ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ರಿಷಬ್ ಎಸ್ ಹೇಳಿದ್ದಾರೆ. ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸಂದೀಪ್ ಸಿಂಗ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಮಿಂಚುತ್ತಿದ್ದಾರೆ. ಸಿನಿಮಾಕ್ಕೆ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಎಂದು ಹೆಸರಿಡಲಾಗಿದೆ.

ಸಿನಿಮಾ ಬಗ್ಗೆ ಮಾತನಾಡಿರುವ ರಿಷಬ್ ಶೆಟ್ಟಿ, ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾವನ್ನು ನಿರ್ದೇಶಕ ಸಂದೀಪ್ ಸಿಂಗ್ ಊಹಿಸಿರುವ ರೀತಿ ಅದ್ಭುತವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ ಅದೆಷ್ಟು ಅದ್ಭುತವಾದುದು ಎಂದರೆ ಕತೆ ಕೇಳಿದ ಕ್ಷಣ ಕಾಲವೂ ಯೋಚಿಸದೆ ಒಪ್ಪಿಕೊಂಡುಬಿಟ್ಟೆ. ಛತ್ರಪತಿ ಶಿವಾಜಿಯವರ ಪಾತ್ರದಲ್ಲಿ ನಟಿಸುವುದು ಪದಗಳಿಗೆ ಮೀರಿದ ಗೌರವ. ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರೀಯ ಹೀರೋ. ಶತಮಾನಗಳ ಕಾಲ ಅವರು ಪ್ರಭಾವ ಬೀರಿದ್ದಾರೆ. ಅಂಥ ಅದ್ಭುತವಾದ ನಾಯಕನ ಪಾತ್ರಕ್ಕೆ ಜೀವ ತುಂಬುತ್ತಿರುವುದು ನನಗೆ ದೊರಕಿದ ಅಭೂತಪೂರ್ವ ಅವಕಾಶ ಮತ್ತು ಗೌರವ’ ಎಂದಿದ್ದಾರೆ.

ಸಿನಿಮಾದ ನಿರ್ದೇಶಕ ಸಂದೀಪ್ ಸಿಂಗ್ ಮಾತನಾಡಿ, ‘ಛತ್ರಪತಿ ಶಿವಾಜಿ ಪಾತ್ರಕ್ಕೆ ರಿಷಬ್ ಶೆಟ್ಟಿ ನನ್ನ ಏಕೈಕ ಆಯ್ಕೆ ಆಗಿದ್ದರು. ಅವರನ್ನು ಹೊರತು ಇನ್ಯಾರನ್ನೂ ಆ ಪಾತ್ರಕ್ಕೆ ಕಲ್ಪನೆ ಸಹ ಮಾಡಿಕೊಂಡಿಲ್ಲ ನಾನು. ಈ ಸಿನಿಮಾ ನಿರ್ದೇಶನ ಮಾಡುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ತೆರೆಯ ಮೇಲೆ ತರುವುದು ನನ್ನ ಪಾಲಿಗೆ ಅತ್ಯಂತ ಮಹತ್ತರವಾದುದು ಮತ್ತು ಗೌರವಪೂರ್ವಕವಾದುದು, ಸಿನಿಮಾದ ತಂತ್ರಜ್ಞಾನ, ಭಾರತೀಯ ಸಿನಿಮಾರಂಗವನ್ನು ವಿಶ್ವದರ್ಜೆಗೆ ಏರಿಸುವಂತಿರಲಿದೆ’ ಎಂದಿದ್ದಾರೆ.

‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ 2027 ಜನವರಿ 21 ಕ್ಕೆ ವಿಶ್ವಮಟ್ಟದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ನಿರ್ದೇಶಕ ಸಂದೀಪ್ ಸಿಂಗ್ ಈ ಹಿಂದೆ ಅಕ್ಷಯ್ ಕುಮಾರ್ ನಟನೆಯ ‘ರೌಡಿ ರಾಥೋಡ್’, ದೀಪಿಕಾ-ರಣವೀರ್ ನಟನೆಯ ‘ರಾಮ್ ಲೀಲಾ’, ಪ್ರಿಯಾಂಕಾ ನಟನೆಯ ‘ಮೇರಿ ಕೋಮ್’ ಸಿನಿಮಾಗಳ ಸಹ ನಿರ್ಮಾಣ ಮಾಡಿದ್ದಾರೆ. ಅದಾದ ಬಳಿಕ ಐಶ್ವರ್ಯಾ ರೈ ನಟನೆಯ ‘ಸರಬ್‌ಜೀತ್’, ಅಮಿತಾಭ್ ಬಚ್ಚನ್ ನಟನೆಯ ‘ಝುಂಡ್’, ‘ಪಿಎಂ ನರೇಂದ್ರ ಮೋದಿ’, ‘ಮೇ ಅಟಲ್ ಹೂ’ ಮುಂತಾದ ಕೆಲವು ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಇದೀಗ ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾವನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ: Junior NTR: ಅಮ್ಮನ ಜತೆ ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಜ್ಯೂ. ಎನ್‌ಟಿಆರ್‌; ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ ಸಾಥ್‌