Sunday, 29th December 2024

Road Accident: ಮರಾಠಿಯ ಖ್ಯಾತ ನಟಿ ಊರ್ಮಿಳಾ ಕೊಠಾರೆ ಕಾರು ಹರಿದು ಕಾರ್ಮಿಕ ಸಾವು; ಚಾಲಕನಿಗೂ ಗಾಯ

Road Accident Mumbai

ಮುಂಬೈ: ಮರಾಠಿ ಕಲಾವಿದೆ (Marathi actor)ಯೊಬ್ಬರ ಕಾರು ಹರಿದು ಕಾರ್ಮಿಕರೊಬ್ಬರು ಮೃತಪಟ್ಟು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಕಾಂದಿವಲಿಯಲ್ಲಿ ಈ ಘಟನೆ ನಡೆದಿದ್ದು, ಮರಾಠಿ ಕಲಾವಿದೆ ಮತ್ತು ಅವರ ಕಾರು ಚಾಲಕ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡ ಮರಾಠಿ ನಟಿಯನ್ನು ಊರ್ಮಿಳಾ ಕೊಠಾರೆ (Urmila Kothare) ಎಂದು ಗುರುತಿಸಲಾಗಿದೆ (Road Accident).

ನಟಿ ಊರ್ಮಿಳಾ ಕೊಠಾರೆ ಅಲಿಯಾಸ್ ಊರ್ಮಿಳಾ ಕನೆಟ್ಕರ್ ಶುಕ್ರವಾರ (ಡಿ. 27) ರಾತ್ರಿ ಚಿತ್ರೀಕರಣ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡು ಪೊಯಿಸರ್ ಮೆಟ್ರೋ ನಿಲ್ದಾಣದ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಇಬ್ಬರು ಕಾರ್ಮಿಕರ ಮೇಲೆ ಹರಿದಿದೆ ಮತ್ತು ಅವರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಚಾಲಕನಿಗೂ ಗಂಭೀರ ಗಾಯಗಳಾಗಿವೆ. ಇತ್ತ ಊರ್ಮಿಳಾ ಕೊಠಾರೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತಕ್ಕೀಡಾದ ಹುಂಡೈ ವೆರ್ನಾ (Hyundai Verna) ಕಾರು ವೇಗದಲ್ಲಿ ಸಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಏರ್‌ ಬ್ಯಾಗ್‌ ಸರಿಯಾದ ಸಮಯಕ್ಕೆ ತೆರೆದುಕೊಂಡ ಕಾರಣ ಊರ್ಮಿಳಾ ಕೊಠಾರೆ ಅಪಾಯದಿಂದ ಪಾರಾಗಿದ್ದಾರೆ.

ಸದ್ಯ ಚಾಲಕನ ವಿರುದ್ದ ಪೊಲೀಸರು ದೂರು ದಾಖಲಿಸಿದ್ದಾರೆ. ಅತೀ ವೇಗದ ಚಾಲನೆ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಜೀವ ಹಾನಿ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಊರ್ಮಿಳಾ ಕೊಠಾರೆ ಅವರು ಮರಾಠಿ ಚಿತ್ರಗಳ ಜತೆಗೆ ಹಿಂದಿ, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ವೆಬ್‌ ಸೀರಿಸ್‌, ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. 2006ರಲ್ಲಿ ತೆರೆಕಂಡ ʼಶುಭ ಮಂಗಳ್‌ ಸಾವಧಾನ್‌ʼ ಮರಾಠಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು 2013ರಲ್ಲಿ ʼವೆಲ್‌ಕಂ ಒಬಾಮʼ ಸಿನಿಮಾ ಮೂಲಕ ಟಾಲಿವುಡ್‌ ಪ್ರವೇಶಿಸಿದರು. 2022 ರಿಲೀಸ್‌ ಆದ ʼಥಾಂಕ್‌ ಗಾಡ್‌ʼ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: BBK 11: ಮೋಸದಾಟ ಆಡಿದ ಭವ್ಯಾಗೆ ಕಿಚ್ಚನ ಖಡಕ್ ಕ್ಲಾಸ್