ಆಲಪ್ಪುಳ: ಕೇರಳದಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಕೇರಳ ಸಾರಿಗೆ ಸಂಸ್ಥೆಯ (KSRTC) ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯಕೀಯ ವಿದ್ಯಾರ್ಥಿಗಳು (Medical Students) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಲಪ್ಪುಳದ ಕಲಾರ್‌ಕೋಡ್ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ, ಕೆಎಸ್‌ಆರ್‌ಟಿಸಿ ಸೂಪರ್-ಫಾಸ್ಟ್ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ವಿದ್ಯಾರ್ಥಿಗಳಲ್ಲದೆ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ ನಾಲ್ವರು ಪ್ರಯಾಣಿಕರಿಗೂ ಗಾಯಗಳಾಗಿವೆ.
ವರದಿಗಳ ಪ್ರಕಾರ, ಮೃತರಲ್ಲಿ ಮೂವರನ್ನು ಮುಹ್ಸಿನ್ ಮುಹಮ್ಮದ್, ಇಬ್ರಾಹಿಂ ಮತ್ತು ದೇವನ್ ಎಂದು ಗುರುತಿಸಲಾಗಿದೆ, ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಂದನಂ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ಎಂಬಿಬಿಎಸ್ ಏಳು ವಿದ್ಯಾರ್ಥಿಗಳಲ್ಲಿ ಸೇರಿದ್ದಾರೆ. ಕಾರು ಮತ್ತು ಬಸ್ ನಡುವೆ ಭಾರಿ ಡಿಕ್ಕಿ ಸಂಭವಿಸಿ ಕಾರು ತೀವ್ರವಾಗಿ ಜಖಂಗೊಂಡಿದೆ. ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು ಕಾರಿನ ಜಖಂಗೊಂಡ ಅವಶೇಷಗಳಿಂದ ಸಂತ್ರಸ್ತರನ್ನು ಹೊರತೆಗೆಯಲು ಕತ್ತರಿಸುವ ಸಾಧನಗಳನ್ನು ಬಳಸಬೇಕಾಯಿತು.
ತೀವ್ರವಾಗಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವಿದ್ಯಾರ್ಥಿಗಳು ಕೋಝಿಕ್ಕೋಡ್, ಕಣ್ಣೂರು, ಚೆರ್ತಾಲ ಮತ್ತು ಲಕ್ಷದ್ವೀಪ ಸೇರಿದಂತೆ ವಿವಿಧ ಪ್ರದೇಶಗಳಿಂದ ಬಂದವರು. ಅಪಘಾತದ ಸಂದರ್ಭದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು ನಾಲ್ವರು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಭೀಕರ ಅಪಘಾತಕ್ಕೆ ಕಾರಣವೇನೆಂದು ತಿಳಿಯಲು ತನಿಖೆ ಆರಂಭಿಸಲಾಗಿದೆ.
ಇದನ್ನೂ ಓದಿ: Road Accident: ಭೀಕರ ರಸ್ತೆ ಅಪಘಾತ, ಇಬ್ಬರು ವಿದ್ಯಾರ್ಥಿಗಳ ದುರ್ಮರಣ