Saturday, 4th January 2025

Russia-Built Warship: ಫೆಬ್ರವರಿಯೊಳಗೆ ಭಾರತಕ್ಕೆ ಬರಲಿದೆ ರಷ್ಯಾ ನಿರ್ಮಿತ ಹೊಸ ಯುದ್ಧನೌಕೆ

ನವದೆಹಲಿ: ರಹಸ್ಯ ಕ್ಷಿಪಣಿ ಯುದ್ಧನೌಕೆ(Stealth Missile Frigate)  ಐಎನ್‌ಎಸ್ ತುಶಿಲ್(INS Tushil) ಫೆಬ್ರವರಿ ಮಧ್ಯದಲ್ಲಿ ದೇಶದ ಪಶ್ಚಿಮ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಇಂದು (ಡಿ.29) ತಿಳಿಸಿದ್ದಾರೆ. ಡಿಸೆಂಬರ್ 9 ರಂದು ರಷ್ಯಾದ ಕಲಿನಿನ್‌ಗ್ರಾಡ್‌ನಲ್ಲಿರುವ ಯಂತರ್ ಶಿಪ್‌ಯಾರ್ಡ್‌ನಲ್ಲಿ ಭಾರತೀಯ ನೌಕಾಪಡೆಗೆ ಯುದ್ಧ ನೌಕೆಯನ್ನು ನಿಯೋಜಿಸಲಾಗಿತ್ತು.(Russia-Built Warship)

ಯುದ್ಧ ನೌಕೆಯು ಮುಂಬೈ ಮೂಲದ ವೆಸ್ಟರ್ನ್ ಫ್ಲೀಟ್‌ನ ಭಾಗವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajanath Singh) ಅವರ ಸಮ್ಮುಖದಲ್ಲಿ ಇದನ್ನು ನಿಯೋಜಿಸಲಾಗಿತ್ತು. ಅವರು ಯುದ್ಧನೌಕೆಯನ್ನು “ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಾಗರ ಸಾಮರ್ಥ್ಯಕ್ಕೆ ಇದು ಸಾಕ್ಷಿಯಾಗಿದೆ. ಹೆಮ್ಮೆ ಅನ್ನಿಸಿದೆ. ಹಾಗೆ ಇದು ಎರಡು ದೇಶಗಳ ನಡುವಿನ ದೀರ್ಘಕಾಲದ ಸ್ನೇಹದಲ್ಲಿ ಮಹತ್ವದ ಮೈಲಿಗಲ್ಲಾಗಿದೆ” ಎಂದು ಬಣ್ಣಿಸಿದ್ದಾರೆ.

ಯುದ್ಧ ನೌಕೆಯು ಭಾರತ ಮತ್ತು ಮೊರಾಕೊ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತು ನೌಕಾ ಸಹಕಾರವನ್ನು ಬಲಪಡಿಸುವ ಭಾಗವಾಗಿದ್ದು, INS ತುಶಿಲ್ ಡಿಸೆಂಬರ್ 27 ರಂದು ಭಾರತಕ್ಕೆ ತೆರಳುವ ಮಾರ್ಗದಲ್ಲಿ ಮೊರಾಕೊದ ಕಾಸಾಬ್ಲಾಂಕಾಗೆ ಆಗಮಿಸಿತು. ಯುದ್ಧನೌಕೆಯು ಭಾರತಕ್ಕೆ ಆಗಮಿಸುವ ಮೊದಲು ಪಶ್ಚಿಮ ಆಫ್ರಿಕಾದ ಕರಾವಳಿಯ ಗಿನಿಯಾ ಕೊಲ್ಲಿಯಲ್ಲಿ ಕಡಲ್ಗಳ್ಳತನ ವಿರೋಧಿ ಗಸ್ತು ನಡೆಸಲಿದೆ ಎಂದು ಅಧಿಕಾರಿಗಳು ವಿವರವಾಗಿ ತಿಳಿಸಿದ್ದಾರೆ.

ಅಕ್ಟೋಬರ್ 2023 ರಲ್ಲಿ, ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಕಡಲ್ಗಳ್ಳತನದ ವಿರುದ್ಧ ಹೋರಾಡುವುದು ಸೇರಿದಂತೆ ಕಡಲ ಭದ್ರತಾ ಸಹಕಾರವನ್ನು ಹೆಚ್ಚಿಸಲು ಗಿನಿಯಾ ಕೊಲ್ಲಿಯಲ್ಲಿ ತಮ್ಮ ಮೊದಲ ನೌಕಾ ತಯಾರಿ ಯೋಜನೆಯನ್ನು ನಡೆಸಿತು. ಐಎನ್‌ಎಸ್ ಸುಮೇಧಾ, ಕಡಲಾಚೆಯ ಗಸ್ತು ನೌಕೆ, ನಂತರ ಇಟಾಲಿಯನ್, ಸ್ಪ್ಯಾನಿಷ್ ಮತ್ತು ಫ್ರೆಂಚ್ ಯುದ್ಧನೌಕೆಗಳು ಈ ಡ್ರಿಲ್‌ಗಳೊಂದಿಗೆ ಸೇರಿಕೊಂಡವು.

ತುಶಿಲ್ ಪ್ರಾಜೆಕ್ಟ್ 1135.6 ರ ನವೀಕರಿಸಿದ ಕ್ರಿವಾಕ್ III ವರ್ಗದ ಯುದ್ಧನೌಕೆಯಾಗಿದ್ದು, ಅಂತಹ ಆರು ಹಡಗುಗಳು ಈಗಾಗಲೇ ಸೇವೆಯಲ್ಲಿವೆ. ಮೂರು ತಲ್ವಾರ್ ವರ್ಗದ ಹಡಗುಗಳು, ಸೇಂಟ್ ಪೀಟರ್ಸ್‌ಬರ್ಗ್‌ನ ಬಾಲ್ಟಿಕ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿದ್ದು, ಮೂರು ಫಾಲೋ-ಆನ್ ಟೆಗ್ ಕ್ಲಾಸ್ ಹಡಗುಗಳು , ಯಂತರ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ ಎಂಬ ಮಾಹಿತಿಯಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಚಾಲ್ತಿಯಲ್ಲಿರುವಂತೆಯೇ ಇಬ್ಬರೂ ಬದ್ಧ ವೈರಿಗಳು ಭಾರತಕ್ಕಾಗಿ ಒಗ್ಗೂಡಿದ ಅಪರೂಪದ ಘಟನೆ ನಡೆದಿತ್ತು. ರಷ್ಯಾ ಮತ್ತು ಉಕ್ರೇನ್ ನಡುವಿನ ವರ್ಷಗಳ ಸುದೀರ್ಘ ಯುದ್ಧದ ಹೊರತಾಗಿಯೂ, ಮಾಸ್ಕೋ ಮತ್ತು ಕೀವ್ ಭಾರತಕ್ಕಾಗಿ ಯುದ್ಧನೌಕೆ ನಿರ್ಮಾಣಕ್ಕಾಗಿ ಒಟ್ಟಾಗಿ ಸೇರಿದ್ದವು. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉನ್ನತ ಮಟ್ಟದ ಭೇಟಿಗಾಗಿ ಮಾಸ್ಕೋಗೆ ಹೋಗಿದ್ದರು.

ಈ ಸುದ್ದಿಯನ್ನೂ ಓದಿ:Eclipses Visible: 2025ರಲ್ಲಿ 4 ಗ್ರಹಣ; ಭಾರತದಲ್ಲಿ ಒಂದೇ ಒಂದು ಗೋಚರ