ತಿರುವನಂತಪುರಂ: ಕಳೆದ ವರ್ಷ ಉದ್ಯೋಗದ ನಿರೀಕ್ಷೆಯಲ್ಲಿ ರಷ್ಯಾಕ್ಕೆ ತೆರಳಿದ್ದ ಕೇರಳದ ತ್ರಿಶೂರ್ ಜಿಲ್ಲೆಯ ವ್ಯಕ್ತಿಯೊಬ್ಬರು ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟಿದ್ದಾರೆ (Russia Ukraine War). ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡ ಅವರ ಸಂಬಂಧಿಕರೊಬ್ಬರು ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
An Indian man (Binil Babu) fighting for Russia on Ukraine frontlines dies .🙏 pic.twitter.com/9BoU53uzPP
— Gyan Jara Hatke (@GyanJaraHatke) January 13, 2025
ಕಳೆದ ಮೂರು ವರ್ಷಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾವಿರಾರು ಸೈನಿಕರು ಎರಡೂ ಕಡೆಯಿಂದ ಸಾವನ್ನಪ್ಪಿದ್ದು, ನೂರಾರು ಸೈನಿಕರು ಗಾಯಗೊಂಡಿದ್ದಾರೆ. ಕಳೆದ ಐದು ತಿಂಗಳ ಅವಧಿಯಲ್ಲಿ 15,000 ಮಂದಿ ರಷ್ಯಾದ ಸೈನಿಕರನ್ನು ಹತ್ಯೆ ಮಾಡಲಾಗಿದ್ದು 23,000 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಸೇನೆ ಹೇಳಿದೆ.
ಈ ಮಧ್ಯೆ ಕೇರಳ ಮೂಲದ ವ್ಯಕ್ತಿಯೊಬ್ಬರು ರಷ್ಯಾ ಮತ್ತು ಉಕ್ರೇನ್ ಯುದ್ದದಲ್ಲಿ ಭಾಗಿಯಾಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಮಾಹಿತಿ ದೊರೆತಿದೆ. ಮೃತರನ್ನು ತ್ರಿಶೂರ್ ಜಿಲ್ಲೆಯ ಕುಟ್ಟನೆಲ್ಲೂರು ಮೂಲದ ಬಿನಿಲ್ ಬಾಬು (31) ಎಂದು ಗುರುತಿಸಲಾಗಿದೆ. ಅವರು ತಂದೆ-ತಾಯಿ, ಪತ್ನಿ ಹಾಗೂ ಐದು ತಿಂಗಳ ಹಸುಗೂಸು ಮಗನನ್ನು ಅಗಲಿದ್ದಾರೆ.
ಬಿನಿಲ್ ಅವರ ಪತ್ನಿ ತಮ್ಮ ಪತಿ ನಿಧನರಾದ ಬಗ್ಗೆ ಭಾರತೀಯ ರಾಯಭಾರ ಕಚೇರಿಯಿಂದ ಧೃಡೀಕರಣ ಪಡೆದಿದ್ದಾರೆ. ಬಿನಿಲ್ ಸಾವಿನ ಖಚಿತ ಮಾಹಿತಿ ಪಡೆದುಕೊಂಡಿರುವ ಅವರ ಸಂಬಂಧಿಕರಾದ ಸನೀಶ್ ಮಾತನಾಡಿ, “ಸೋಮವಾರ (ಜ. 13) ಮಧ್ಯಾಹ್ನ 1 ಗಂಟೆ ಸುಮಾರಿಗೆ ನಮಗೆ ರಾಯಭಾರ ಕಚೇರಿಯಿಂದ ಸಾವಿನ ಬಗ್ಗೆ ದೃಢೀಕರಣ ಸಿಕ್ಕಿದೆ. ಬಿನಿಲ್ ಸಾವಿನ ಬಗ್ಗೆ ರಷ್ಯಾದ ಕಡೆಯಿಂದ ರಾಯಭಾರ ಕಚೇರಿಗೆ ಸುದ್ದಿ ಬಂದ ನಂತರ ದೃಢೀಕರಣ ಬಂದಿದೆ. ಆದರೆ ಅವರು ಯಾವಾಗ ಅಥವಾ ಹೇಗೆ ಮೃತಪಟ್ಟರು ಎಂಬುದರ ಕುರಿತು ನಮಗೆ ಯಾವುದೇ ವಿವರಗಳಿಲ್ಲ. ನಾವು ಆ ವಿವರಗಳಿಗಾಗಿ ಕಾಯುತ್ತಿದ್ದೇವೆ ಮತ್ತು ಅವರ ಪಾರ್ಥಿವ ಶರೀರವನ್ನು ಮನೆಗೆ ಹಿಂದಿರುಗಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಬಿನಿಲ್ ಅವರ ಸಂಬಂಧಿಕರಾದ ಜೈನ್, ಬಿನಿಲ್ ಜತೆಗೆ ರಷ್ಯಾಕ್ಕೆ ಹೋಗಿದ್ದರು. ಅವರು ಕೂಡ ಯುದ್ದದಲ್ಲಿ ಗಾಯಗೊಂಡಿದ್ದು, ಸದ್ಯ ಮಾಸ್ಕೋದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್