Tuesday, 26th November 2024

Sabarimala Temple: ಶಬರಿಮಲೆ ದೇಗುಲದ ಗರ್ಭಗುಡಿಗೆ ಬೆನ್ನು ಹಾಕಿ ನಿಂತು ಪೊಲೀಸರ ಪೋಸ್‌; ವಿವಾದ ಹುಟ್ಟು ಹಾಕಿದ ಫೋಟೊ

Sabarimala Temple

ತಿರುವನಂತಪುರಂ: ಸಮವಸ್ತ್ರ ಧರಿಸಿದ ಕೇರಳದ ಪೊಲೀಸರು ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ದೇವಸ್ಥಾನ (Sabarimala Temple)ದ ಪವಿತ್ರ 18 ಮೆಟ್ಟಿಲುಗಳ ಮೇಲೆ ನಿಂತು ಪೋಸ್‌ ನೀಡಿರುವ ಫೋಟೊ ವೈರಲ್‌ ಆಗಿದ್ದು, ವಿವಾದ ಹುಟ್ಟು ಹಾಕಿದೆ. ಪೊಲೀಸರು ದೇವಸ್ಥಾನದ ಸಂಪ್ರದಾಯವನ್ನು ಉಲ್ಲಂಘಿಸಿದ್ದಾರೆ ಎನ್ನುವ ಕೂಗು ಕೇಳಿ ಬಂದಿದೆ. ಈ ವಿಚಾರ ವಿವಾದ ಹುಟ್ಟುಹಾಕಿರುವ ಬೆನ್ನಲ್ಲೇ ಪೊಲೀಸ್‌ ಅಧಿಕಾರಿಗಳು ತನಿಖೆಗೆ ಆದೇಶ ಹೊರಡಿಸಿದ್ದಾರೆ (Viral News).

ಶನಿವಾರ (ನ. 23) ಈ ಫೋಟೊವನ್ನು ಕ್ಲಿಕ್ಕಿಸಲಾಗಿದೆ. ಇದರಲ್ಲಿ ಸಮವಸ್ತ್ರದಲ್ಲಿರುವ ಸುಮಾರು 28 ಪೊಲೀಸರು ಗರ್ಭಗುಡಿಗೆ ಬೆನ್ನು ಹಾಕಿ, 18 ಮೆಟ್ಟಿಲಿನ ಮೇಲೆ ನಿಂತಿರುವುದು ಕಂಡು ಬಂದಿದೆ. ಸಂಪ್ರದಾಯದ ಪ್ರಕಾರ ಗರ್ಭಗುಡಿಗೆ ಬೆನ್ನು ಹಾಕಿ ನಿಲ್ಲುವಂತಿಲ್ಲ. ಈ ನಿಯಮವನ್ನು ಪೊಲೀಸರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಫೋಟೊವನ್ನು ದೇವಾಲಯದ ಬಾಗಿಲುಗಳನ್ನು ಮುಚ್ಚಿದ ನಂತರ ಅಪರಾಹ್ನ ಕ್ಲಿಕ್ಕಿಸಲಾಗಿದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ ದೇವಾಲಯದ ಪುರೋಹಿತರು ಗರ್ಭಗುಡಿಯ ಬಾಗಿಲು ಮುಚ್ಚಿದ ಬಳಿಕ ಗರ್ಭಗುಡಿಯ ಕಡೆಗೆ ಮುಖ ಮಾಡಿಯೇ 18 ಮೆಟ್ಟಿಲುಗಳನ್ನು ಇಳಿಯುತ್ತಾರೆ.

ಭಕ್ತರ ಜನಸಂದಣಿಯನ್ನು ನಿಯಂತ್ರಿಸಲು ಕರ್ತವ್ಯದಲ್ಲಿದ್ದ ಪೊಲೀಸರು ಪೋಸ್‌ ನೀಡಿದ್ದು ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕರ್ತವ್ಯ ಮುಗಿಸಿ ತೆರಳುವ ವೇಳೆ ಇವರು ಪೋಟೊ ತೆಗೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತನಿಖೆಗೆ ಆದೇಶ

ಎಡಿಜಿಪಿ ಎಸ್‌.ಶ್ರೀಜಿತ್‌ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಸನ್ನಿಧಾನದ ವಿಶೇಷ ಅಧಿಕಾರಿ ಕೆ.ಇ.ಬೈಜು ಘಟನೆಯ ಬಗ್ಗೆ ಸಂಬಂಧಪಟ್ಟವರಿಗೆ ಶೀಘ್ರದಲ್ಲಿಯೇ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ನ. 16ರಂದು ಪ್ರಾರಂಭವಾದ 2 ತಿಂಗಳ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯ ಋತುವಿನಲ್ಲಿ ಈ ವಿವಾದ ಭುಗಿಲೆದ್ದಿದೆ. ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಿದ ನಂತರ ಫೋಟೊ ಶೂಟ್ ನಡೆದಿದೆ. ಆನ್‌ಲೈನ್‌ ಮೂಲಕ ಬುಕಿಂಗ್ ಮಾಡಿದ ಸುಮಾರು 70,000 ಭಕ್ತರನ್ನು ನಿಯಂತ್ರಿಸಲು ನಿಯೋಜಿಸಲ್ಪಟ್ಟ ಮೊದಲ ಬ್ಯಾಚ್‌ನ ಸಿಬ್ಬಂದಿ ತಮ್ಮ ಕರ್ತವ್ಯ ಪೂರ್ತಿಗೊಳಿಸಿ ತೆರಳುವ ಮುನ್ನ ಈ ಗ್ರೂಪ್‌ ಫೋಟೊ ತೆಗೆಸಿಕೊಂಡಿದ್ದಾರೆ.

ಸದ್ಯ ಈ ಫೋಟೊ ವೈರಲ್‌ ಆಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸಂಪ್ರದಾಯವನ್ನು ಉಲ್ಲಂಘಿಸಿದ ಕಾರಣಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಹಿಂದೂಪರ ಸಂಘಟನೆಗಳು ಪೊಲೀಸರ ಕ್ಷಮೆಯಾಚನೆಗೆ ಪಟ್ಟು ಹಿಡಿದಿವೆ. ಕರ್ತವ್ಯನಿರತರಿಗೆ ದೇವಾಲಯದ ಸಂಪ್ರದಾಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದೂ ಆಗ್ರಹಿಸಿವೆ. ಶಬರಿಮಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸಿಬ್ಬಂದಿ ಸಂಪ್ರದಾಯಗಳನ್ನು ಗೌರವಿಸುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಪ್ರೋಟೋಕಾಲ್‌ ಅಳವಡಿಸುವಂತೆ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.

ಸದ್ಯ ಶಬರಿಮಲೆಗೆ ಭಕ್ತ ಜನ ಪ್ರವಾಹವೇ ಹರಿದು ಬರುತ್ತಿದೆ. 9 ದಿನಗಳಲ್ಲಿ ಸುಮಾರು 6 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಟ್ರಾವಂಕೂರ್‌ ದೇವಸ್ವಂ ಬೋರ್ಡ್‌ ತಿಳಿಸಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಇಲ್ಲಿಗೆ 3 ಲಕ್ಷ ಭಕ್ತರು ಭೇಟಿ ನೀಡಿದ್ದರು. ಅಲ್ಲದೆ 41.64 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ 13.33 ಕೋಟಿ ರೂ. ಅಧಿಕ.

ಈ ಸುದ್ದಿಯನ್ನೂ ಓದಿ: Sabarimala Yatra: ಶಬರಿಮಲೆ ಯಾತ್ರಿಕರಿಗೆ ಗುಡ್‌ನ್ಯೂಸ್‌! ವಿಶೇಷ ರೈಲು ಸೇವೆ ಆರಂಭ