Thursday, 19th September 2024

Sam Pitroda: ʻರಾಹುಲ್‌ ಗಾಂಧಿ ಪಪ್ಪು ಅಲ್ಲʼ- ಪ್ರತಿಪಕ್ಷಗಳಿಗೆ ಸ್ಯಾಮ್‌ ಪಿತ್ರೋಡಾ ಟಾಂಗ್‌

Sam Pitroda

ನವದೆಹಲಿ: ಸಂಸದ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ತಮ್ಮ ತಂದೆ ರಾಜೀವ್ ಗಾಂಧಿಗೆ ಹೋಲಿಸಿದರೆ ಹೆಚ್ಚು ಬುದ್ಧಿಜೀವಿ ಮತ್ತು ಹೆಚ್ಚು ಚತುರ ಎಂದು ಹೇಳಿದ್ದ ಕಾಂಗ್ರೆಸ್‌ ಮುಖಂಡ, ಭಾರತೀಯ ಕಾಂಗ್ರೆಸ್‌ನ ಸಾಗರೋತ್ತರ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ(Sam Pitroda) ಇದೀಗ ಮತ್ತೆ ರಾಹುಲ್‌ ಗಾಂಧಿ ಪರ ಬ್ಯಾಟಿಂಗ್‌ ನಡೆಸಿದ್ದಾರೆ. ಟೆಕ್ಸಾಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಪಪ್ಪು ಅಲ್ಲ ಎಂದು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ನಾಯಕರು ರಾಹುಲ್‌ ಗಾಂಧಿಯವರನ್ನು ಪಪ್ಪು ಎಂದು ಕರೆದು ಮೂದಲಿಸುತ್ತಾರೆ. ರಾಹುಲ್‌ ಪಪ್ಪು ಅಲ್ಲ. ಅವರೊಬ್ಬ ಸುಕ್ಷಿತರು. ಸಕಲ ಪಾರಂಗತರು. ಹಲವು ವಿಚಾರಗಳ ಬಗ್ಗೆ ಆಳವಾದ ಜ್ಞಾನವುಳ್ಳವರು. ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭ ಅಲ್ಲ ಎಂದು ಪಿತ್ರೋಡಾ ಹೇಳಿದ್ದಾರೆ.

ರಾಹುಲ್‌ ಗಾಂಧಿಯವರ ಚಿಂತನೆ ನಮ್ಮೆಲ್ಲರಿಗಿಂತಲೂ ಎತ್ತರದಲ್ಲಿದೆ. ಜನಾಂಗ, ಧರ್ಮ, ಭಾಷೆ, ಅಥವಾ ರಾಜ್ಯವನ್ನು ಲೆಕ್ಕಿಸದೆ ನಾವು ನಮ್ಮ ಜನರನ್ನು ಗೌರವಿಸುವುದು, ನಾವು ಎಲ್ಲರಿಗೂ ಒಂದೇ ರೀತಿಯ ಅವಕಾಶಗಳನ್ನು ಸೃಷ್ಟಿಸುವುದು, ಕಾರ್ಮಿಕರಿಗೆ ಘನತೆಯನ್ನು ಒದಗಿಸುವುದು ಈ ಎಲ್ಲಾ ವಿಚಾರಗಳ ಬಗ್ಗೆ ಅವರು ಹೆಚ್ಚು ಹೆಚ್ಚು ಮಾತನಾಡುತ್ತಾರೆ. ಇದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರು ವಿಭಿನ್ನ ಕಾರ್ಯಸೂಚಿಯನ್ನು ಹೊಂದಿದ್ದಾರೆ. ಪ್ರಜಾಪ್ರಭುತ್ವವು ಅಷ್ಟು ಸರಳವಲ್ಲ ಮತ್ತು ಅದನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಪ್ರಜಾಪ್ರಭುತ್ವಕ್ಕೆ ನಮ್ಮಂತಹ ಹೆಚ್ಚಿನ ಸಂಖ್ಯೆಯ ಜನರಿಂದ ಕೆಲಸ ಬೇಕಾಗುತ್ತದೆ. ನಾವು ಅದನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಏಕೆಂದರೆ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುವತ್ತ ಗಮನಹರಿಸುವ ಜನರಿದ್ದಾರೆ ಎಂದು ಪಿತ್ರೋಡಾ ವಿವರಿಸಿದರು.

ಈ ಹಿಂದೆಯೂ ಪಿತ್ರೋಡಾ ಸಂದರ್ಶವೊಂದರಲ್ಲಿ ರಾಹುಲ್‌ಗಾಂಧಿಯವರನ್ನು ಹಾಡಿ ಹೊಗಳಿದ್ದರು. ಸಂಸದ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತಮ್ಮ ತಂದೆ ರಾಜೀವ್ ಗಾಂಧಿಗೆ ಹೋಲಿಸಿದರೆ ಹೆಚ್ಚು ಬುದ್ಧಿಜೀವಿ ಮತ್ತು ಹೆಚ್ಚು ಚತುರ ಎಂದು ಗಾಂಧಿ ಕುಟುಂಬದ ದೀರ್ಘಕಾಲದ ವಿಶ್ವಾಸಾರ್ಹ ವ್ಯಕ್ತಿ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭವಿಷ್ಯದ ಪ್ರಧಾನಿಯಾಗುವ ಎಲ್ಲ ಗುಣಗಳನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದರು.

ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷ ಪಿತ್ರೋಡಾ ಅವರು ಈ ಹಿಂದೆ ರಾಹುಲ್ ಗಾಂಧಿ ವಿದೇಶ ಪ್ರವಾಸದ ಸಂದರ್ಭದಲ್ಲಿ ಬಿಜೆಪಿಯಿಂದ ಎದುರಿಸಿದ್ದ ಟೀಕೆಗಳನ್ನು”ನಕಲಿ” ಎಂದು ಹೇಳಿದ್ದಾರೆ. ಮುಂದಿನ ವಾರ ರಾಹುಲ್ ಗಾಂಧಿ ಅವರ ಅಮೆರಿಕ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪಿತ್ರೋಡಾ, ಅವರು ತಮ್ಮ ಸರ್ಕಾರಿ ಕಾರ್ಯಕ್ರಮದಡಿ ಅಮೆರಿಕಕ್ಕೆ ಹೋಗುತ್ತಿಲ್ಲ. ಕ್ಯಾಪಿಟಲ್ ಹಿಲ್ಸ್‌ನಲ್ಲಿ ವಿಭಿನ್ನ ಜನರೊಂದಿಗೆ ಸಂವಹನ ನಡೆಸಲು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi : ರಾಹುಲ್‌ ಗಾಂಧಿ ಅಪ್ಪ ರಾಜೀವ್‌ ಗಾಂಧಿಗಿಂತಲೂ ಚತುರ ಎಂದು ಹೊಗಳಿದ ಸ್ಯಾಮ್‌ ಪಿತ್ರೋಡಾ