Friday, 10th January 2025

Sanjay Raut: ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತು; ಶಿವಸೇನೆ ಮುಖಂಡ ಸಂಜಯ್‌ ರಾವತ್‌ ಅರೆಸ್ಟ್‌

Sanjay Raut

ಮುಂಬೈ: ಶಿವಸೇನೆ ಉದ್ಧವ್‌ ಠಾಕ್ರೆ ಬಣ(Shiv Sena (UBT))ದ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌(Sanjay Raut) ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ(Defamation case) ಅವರು ದೋಷಿ ಎಂದು ಸಾಬೀತಾಗಿದ್ದು, ಅವರನ್ನು ಅರೆಸ್ಟ್‌ ಮಾಡಲಾಗಿದೆ. ಬಿಜೆಪಿ ಮುಖಂಡ ಕೀರ್ತಿ ಸೋಮಯಾ ಅವರ ಪತ್ನಿ ಮೇಧಾ ಕೀರ್ತಿ ಸೋಮಯಾ ಅವರು ಸಂಜಯ್‌ ರಾವತ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲಿ ರಾವತ್‌ ಅವರನ್ನು ಮುಂಬೈಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ದೋಷಿ ಎಂದು ತೀರ್ಪು ನೀಡಿದೆ.

ಕೋರ್ಟ್‌ ತೀರ್ಪು ಹೊರ ಬೀಳುತ್ತಿದ್ದಂತೆ ಸಂಜಯ್‌ ರಾವತ್‌ ಅವರನ್ನು ಬಂಧಿಸಲಾಗಿದೆ. ಸೆಕ್ಷನ್‌ 500ರ ಅಡಿಯಲ್ಲಿ ಸಂಜಯ್‌ ರಾವತ್‌ ಅವರನ್ನು ದೋಷಿ ಎಂದು ಘೋಷಿಸಿರುವ ಕೋರ್ಟ್‌ ಅವರಿಗೆ15 ದಿನಗಳ ಕಾಲ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ.

ಏನಿದು ಪ್ರಕರಣ?

ಸಂಜಯ್‌ ರಾವತ್‌ ಅವರು ಬಿಜೆಪಿ ಮುಖಂಡ ಕೀರ್ತಿ ಸೋಮಯಾ ಮತ್ತು ಅವರ ಪತ್ನಿ ಮೇಧಾ ಕೀರ್ತಿ ಸೋಮಯಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಮೀರಾ ಬಯಾಂದರ್‌ ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಶೌಚಾಲಯಗಳ ನಿರ್ಮಾಣದಲ್ಲಿ ಕೀರ್ತಿ ಮತ್ತು ಮೇಧಾ100 ಕೋಟಿ ರೂ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ರಾವತ್‌ ಆರೋಪಿಸಿದ್ದರು.

ಇದರ ಬೆನ್ನಲ್ಲೇ ಮೇಧಾ ಅವರು ರಾವತ್‌ ಆರೋಪವನ್ನು ಅಲ್ಲಗೆಲೆದಿದ್ದು, ಇದು ನಿರಾಧಾರ ಮತ್ತು ಮಾನಹಅನಿ ಹೇಳಿಕೆ ಎಂದು ತಿರುಗೇಟು ನೀಡಿದ್ದರು. ಅಲ್ಲದೇ ಜನರ ಕಣ್ಣಲ್ಲಿ ತಮ್ಮ ಕುಟುಂಬದ ಮಾನಹಾನಿಗೆ ರಾವತ್‌ ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ. ಬಳಿಕ ರಾವತ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ಸುದ್ದಿಯನ್ನೂ ಓದಿ: ಸಂಜಯ್‌ ರಾವತ್‌ ನ್ಯಾಯಾಂಗ ಬಂಧನ ಸೆ.19ರವರೆಗೆ ವಿಸ್ತರಣೆ